ನೀರು ಕೊಡಿ.. ನೀರು ಕೊಡಿ…‌ ಕೊಡಪಾನ, ಬಕೆಟ್ ಹಿಡಿದು ಅಜ್ಜಾವರ ಗ್ರಾಮ ಸಭೆಯಲ್ಲಿ ಪ್ರತಿಭಟನೆ

0

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ‌ಸಭೆಯು ಮೇನಾಲ ಸಮುದಾಯ ಭವನದಲ್ಲಿ ಜು.22ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ರೈ ಮೇನಾಲ, ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು, ಅಬ್ದುಲ್ಲ ಅಜ್ಜಾವರ, ಶ್ವೇತಕುಮಾರಿ, ವಿಶ್ವನಾಥ ಮುಳ್ಯಮಠ, ರಾಹುಲ್ ಅಡ್ಪಂಗಾಯ, ಸತ್ಯವತಿ ಬಸವನಪಾದೆ, ಗೀತಾ ಕಲ್ಲುಗುಡ್ಡೆ, ಸರೋಜಿನಿ, ದೇವಕಿ, ವಿಶ್ವನಾಥ, ರಾಘವ ಮುಳ್ಯ, ಶಿವಕುಮಾರ್ ಮುಳ್ಯ, ರತ್ನಾವತಿ, ಲೀಲಾ ಮನಮೋಹನ್ ಹಾಗೂ ಅಧಿಕಾರಿಗಳು ಇದ್ದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ನೋಡೆಲ್ ಅಧಿಕಾರಿಯಾಗಿದ್ದರು.

ಪಿ.ಡಿ.ಒ. ಜಯಮಾಲ ವರದಿ ವಾಚಿಸುತ್ತಿದ್ದಂತೆ, ಕಾಂತಮಂಗಲ – ದೊಡ್ಡೇರಿ ವಾರ್ಡ್ ನ ಜನರು ಬಾಲಕೃಷ್ಣ ದೊಡ್ಡೇರಿ, ಸತೀಶ್‌ ಬೂಡುಮಕ್ಕಿ ರವರ ನೇತೃತ್ವದಲ್ಲಿ ಕೊಡಪಾನ ಮತ್ತು ಬಕೆಟ್ ಹಿಡಿದು ನೀರು ಕೊಡಿ..ನೀರು ಕೊಡಿ.. ಎಂದು‌ ಘೋಷಣೆ ಕೂಗುತ್ತಾ ಮೆರವಣಿಯಲ್ಲಿ ಗ್ರಾಮ ಸಭೆಗೆ ಬಂದರು.‌ ಸಭೆಯೊಳಗೆ ಆಗಮಿಸಿ ಸಭೆಯ ಎದುರು ನೆಲದಲ್ಲಿ ಕುಳಿತು ತಮ್ಮ ಅಹವಾಲು ಮಂಡಿಸಿದರು. ಬಾಲಕೃಷ್ಣ ದೊಡ್ಡೇರಿಯವರು ಮಾತನಾಡಿ, “ನೀರಿನ ಕನೆಕ್ಷನ್ ಕಟ್ ಮಾಡಿರುವುದರಿಂದ ಆಗಿರುವ ಸಮಸ್ಯೆ ಕುರಿತು ವಿವರಿಸಿದರು. ತೂಗುಸೇತುವೆ ತಡೆಬೇಲಿ ತುಂಡಾಗಿ ಅಪಾಯ ಆಹ್ವಾನದ ಕುರಿತು ವಿವರಿಸಿದರು.
ಸತೀಶ್ ಬೂಡುಮಕ್ಕಿ ಮತ್ತು ಚಂದ್ರಶೇಖರ ಪಲ್ಲತಡ್ಕ ರು ಸ್ಮಶಾನ ಇಲ್ಲದೆ ಆಗುತ್ತಿರುವ ಸಮಸ್ಯೆ ಕುರಿತು ವಿವರಿಸಿದರು. ಪಿಡಿಒ ರವರು ಬಿಲ್ ಪಾವತಿಸದೇ ಇರುವುದರಿಂದ ಆಗುತ್ತಿರುವ ಸಮಸ್ಯೆ ಮತ್ತು ಆಡಳಿತ ಮಂಡಳಿ ನಿರ್ಣಯದಂತೆ ಕ್ರಮ ಜರುಗಿಸಿದ ಕುರಿತು ವಿವರಿಸಿದರು. ಉಪಾಧ್ಯಕ್ಷ ಜಯರಾಮರು, ಪಂಚಾಯತ್ ಗೆ 20 ಲಕ್ಷ ನೀರು ಬಿಲ್ ಬಾಕಿ ಇದೆ. ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಕಷ್ಟವಾಗುತಿದ್ದು, ಬಿಲ್ ಬಾಕಿ ಇರುವವರು ಸ್ವಲ್ಪ ಸ್ವಲ್ಪ ಪಾವತಿಸಿ. ನಾಳೆಯೇ ಕನೆಕ್ಷನ್ ವಾಪಸ್ ಕೊಡಿಸುವ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.

ಪಡ್ಡಂಬೈಲು – ಕರ್ಲಪ್ಪಾಡಿ – ಕುಡೆಂಬಿ ರಸ್ತೆ ಅವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆ ಕುರಿತು ಶಿವರಾಮ ಹಾಗು ಮಿಥುನ್ ಕರ್ಲಪ್ಪಾಡಿ ಮೊದಲಾದವರು ವಿವರಿಸಿದರು. ಈ ಕುರಿತು ಭಾರೀ ಚರ್ಚೆ ಏರ್ಪಟ್ಟಿತು.
ತಾತ್ಕಾಲಿಕ ದುರಸ್ತಿಗೆ ಅನುದಾನದ ವ್ಯವಸ್ಥೆಯ ಭರವಸೆ ಉಪಾಧ್ಯಕ್ಷ ರು ನೀಡಿದ ಮೇರೆಗೆ ಚರ್ಚೆಗೆ ತೆರೆ ಬಿತ್ತು.