ಸುಳ್ಯ ಸೀನಿಯರ್ ಚೇಂಬರ್ ವತಿಯಿಂದ ಪ್ರಕಾಶ್ ಮೂಡಿತ್ತಾಯ ದಂಪತಿಗೆ ಸನ್ಮಾನ

0

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸುಳ್ಯ ಪಯಸ್ವಿನಿ ಘಟಕದ ಸಾಮಾನ್ಯ ಸಭೆ ಜುಲೈ 31 ರಂದು ಸುಳ್ಯ ಶ್ರೀರಾಂಪೇಟೆಯಲ್ಲಿರುವ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಸುಳ್ಯ ಪಯಸ್ವಿನಿ ಲೀಜನ್‌ ಅಧ್ಯಕ್ಷ ಚಂದ್ರಶೇಖರ ನಂಜೆ ವಹಿಸಿದ್ದರು. ಕಾರ್ಯದರ್ಶಿ ಮೋಹನ್ ಎ.ಕೆ. ಪದಗ್ರಹಣ ಸಮಾರಂಭದ ವರದಿಯನ್ನು ಸಭೆಯಲ್ಲಿ ಮುಂದಿಟ್ಟರು.
ಇತ್ತೀಚೆಗೆ ಅಗಲಿದ ಶ್ರೀಮತಿ ಶಶಿಕಲಾ ಶೆಟ್ಟಿಯವರಿಗೆ (ದಿವ್ಯಾ ಚಂದ್ರಶೇಖರ ನಂಜೆಯವರ ತಾಯಿ) ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸೀನಿಯರ್ ದಿನೇಶ್ ಮಡಪ್ಪಾಡಿ ನುಡಿ ನಮನ ಸಮರ್ಪಿಸಿದರು.
ಮುಖ್ಯ ಅತಿಥಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಶಿಕ್ಷಣ, ಯಕ್ಷಗಾನ, ನಾಟಕ, ಬರವಣಿಗೆಯಲ್ಲಿ ವಿಶೇಷವಾದ ಸಾಧನೆಯನ್ನು ಮಾಡುತ್ತಾ, ಸರಕಾರಿ ಶಾಲೆಯ ಶೈಕ್ಷಣಿಕ ವಾತಾವರಣದ ಅಮೂಲಾಗ್ರ ಬದಲಾವಣೆಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಯಶಸ್ಸಿಗೆ ಕಾರಣರಾಗುತ್ತಿರುವ ಪ್ರಕಾಶ್ ಮೂಡಿತ್ತಾಯರನ್ನು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಮಮತಾ ಮೂಡಿತ್ತಾಯರನ್ನು ನಿವೃತ್ತ ಪ್ರಾಂಶುಪಾಲರು, ಸೀನಿಯರ್ ಜೇಸಿಯಾಗಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ್‌ರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಸೀನಿಯರ್ ಚಂದ್ರಶೇಖರ ಪೇರಾಲು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಮೂಡಿತ್ತಾಯರು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಮೌಲ್ಯಗಳ ಕೊರತೆ ಹಾಗೂ ಮೌಲ್ಯವರ್ಧಿತ ಶಿಕ್ಷಣದ ಅವಶ್ಯಕತೆಯ ಬಗ್ಗೆ ಹೇಳಿ, ಪೋಷಕರು ತಮ್ಮ ಮಕ್ಕಳನ್ನು ಆತನ ಸಂಬಂಧಿಕರು ಮತ್ತು ಮಿತ್ರರ ಜತೆಗೆ ಒಡನಾಡಿಕೊಂಡಿರುವಂತೆ ಬೆಳೆಸಬೇಕು ಎಂದರು

        ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ಹಾಗೂ ಟಿ.ಎ.ಪಿ.ಸಿ.ಎಂ.ಎಸ್.  ಉಪಾಧ್ಯಕ್ಷರಾಗಿ ಆಯ್ಕೆಯಾದ ಪಿ.ಎಸ್.ಗಂಗಾಧರ್‌ರವರನ್ನು ಎಸ್.ಆರ್.ಸೂರಯ್ಯ ಹಾಗೂ ಸುಳ್ಯ ತಾಲೂಕು ಕಾರ್ಯರ್ನಿತ ಪತ್ರ ಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಪೆರ್ಲಂಪಾಡಿ ಯವರನ್ನು ಸೀನಿಯರ್ ಧನಂಜಯ ಮದುವೆಗದ್ದೆ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿದರು.
        ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರವನ್ನು ಚಂದ್ರಶೇಖರ ಪೇರಾಲು ರವರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಲಾಯಿತು.
        ಚಂದ್ರಶೇಖರ ನಂಜೆ ಅಧ್ಯಕ್ಷರ ನೆಲೆಯಲ್ಲಿ ಮಾತನಾಡಿದರು.  2024-25 ನೇ ಸಾಲಿನ ಪ್ರಥಮ ಸಭೆಯ ಆತಿಥ್ಯವನ್ನು ಸೀನಿಯರ್ ಕೆ.ಆರ್.ಗಂಗಾಧರ್ ಹಾಗೂ ಸೀನಿಯರ್ ಎಸ್.ಆರ್.ಸೂರಯ್ಯ  ವಹಿಸಿದ್ದರು. ನಂಜೆ ಸ್ವಾಗತಿಸಿ,  ಕಾರ್ಯದರ್ಶಿ ಮೋಹನ್ ಎ.ಕೆ. ವಂದನಾರ್ಪಣೆಗೈದರು.