ಹತ್ತನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಎಸ್ ಜಿ ಎಸ್ ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಕರ್ನಾಟಕ ಸರಕಾರ ಇವರ ಸಹಕಾರದಲ್ಲಿ ಜು. 14 ರಂದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಮೆಮನೆ ಚೇತನ್ ಮತ್ತು ದಿವ್ಯ ದಂಪತಿಗಳ ಪುತ್ರ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮೂರನೆಯ ತರಗತಿಯ ವಿದ್ಯಾರ್ಥಿ ಆಶ್ರಿತ್ ಎ. ಸಿ ಎಂಟು ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಮತ್ತು ಅಂತರಾಷ್ಟ್ರೀಯ ಮಟ್ಟ ಹಾಗೂ ಏಶಿಯನ್ ಮಟ್ಟಕ್ಕೆ ಅರ್ಹತೆ ಪಡೆದಿರುತ್ತಾರೆ.
ಬಾಲಕನ ಈ ಸಾಧನೆಯನ್ನು ಗುರುತಿಸಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅ. 7ರಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ಉಜ್ವಲ್ ಯು.ಜೆ, ಶಾಲಾ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಶಾಲಾ ಶಿಕ್ಷಕ ವೃಂದವರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ರವರು ಈ ಬಾಲಕನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.