ಅರೆಭಾಷೆ ಉಳಿದರೆ ಮಾತ್ರ ಸಂಸ್ಕ್ರತಿ ಉಳಿಯಲು ಸಾಧ್ಯ: ಎ.ಎಸ್.ಪೊನ್ನಣ್ಣ

ಭಾಷೆ ಉಳಿದರೆ ಮಾತ್ರ ಸಂಸ್ಕೃತಿ, ಬಾಂಧವ್ಯ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮದೇ ಆದ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ ಕಲೆಗಳನ್ನು ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ.ಎಸ್ .ಪೊನ್ನಣ್ಣ ಅವರು ಕರೆ ನೀಡಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಭಾಗಮಂಡಲ ನಾಡಗೌಡ ಸಮಾಜ, ಕರಿಕೆ, ಚೇರಂಬಾಣೆ ಗೌಡ ಸಮಾಜ, ಭಾಗಮಂಡಲ ನಾಡಗೌಡ ಯುವ ಒಕ್ಕೂಟ ಮತ್ತು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ಭಾಗಮಂಡಲದ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರೆಭಾಷಿಕರು ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅಮರ ಸುಳ್ಯ ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು. ಅರೆಭಾಷಿಕರು ರಾಜಕೀಯ, ಸಾಹಿತ್ಯ, ಸಂಗೀತ, ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಲವು ಶತಮಾನಗಳಿಂದ ವಾಸಿಸಿಕೊಂಡು ಬಂದಿರುವ ಸಹೋದರತ್ವ, ಸಹಭಾಳ್ವೆ ಮತ್ತು ಭ್ರಾತೃತ್ವವನ್ನು ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಬೇಧಭಾವ ಬಿನ್ನತೆ ಇಲ್ಲದೆ ಬದುಕು ಕಟ್ಟಿಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು.

ಮುಂದಿನ ಒಂದು ಶತಮಾನದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಆತಂಕ ಎಲ್ಲೆಡೆ ಎದುರಾಗುತ್ತಿದೆ. ಆದ್ದರಿಂದ ಸ್ಥಳೀಯ ಭಾಷೆಗಳಾದ ಅರೆಭಾಷೆ, ಕೊಡವ, ತುಳು, ಕೊಂಕಣಿ, ಹೀಗೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿದ್ದಲ್ಲಿ, ಕನ್ನಡ ಭಾಷೆ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ತಾಯಿ ಭಾಷೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು. ಜೀವನಕ್ಕೆ ಇತರೆ ಭಾಷೆ ಕಲಿಯುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಧ್ಯಕ್ಷರಾದ ಸದಾನಂದ ಮಾವಜಿ ಅವರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಚಟುವಟಿಕೆಗಳನ್ನು ಉತ್ತಮವಾಗಿ ಕೈಗೊಂಡು ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನೀಯ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಇತರ ಅಕಾಡೆಮಿಗಳಿಗೆ ಮಾದರಿಯಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಈಗಾಗಲೇ ಗಡಿನಾಡ ಉತ್ಸವವನ್ನು ಸುಳ್ಯದ ಬಂದಡ್ಯ ಮಂಡೆಕೋಲು, ಹಾಗೆಯೇ ಕೊಡಗು ಜಿಲ್ಲೆಯ ಚೆಯ್ಯಂಡಾಣೆ, ಕುಶಾಲನಗರ ಮತ್ತು ಭಾಗಮಂಡಲದಲ್ಲಿ ಹಮ್ಮಿಕೊಂಡು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಸಂಸ್ಕೃತಿ, ಸಾಹಿತ್ಯ, ಸಂಶೋಧನೆ ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸದಾನಂದ ಮಾವಜಿ ತಿಳಿಸಿದರು.


ಆದಿಚುಂಚನಗಿರಿ ಶಾಖಾಮಠ ಹಾಸನ ಇದರ ಪರಮ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಯವರು ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ್, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಪಿ. ಸಿ ಜಯರಾಮ, ಶ್ರೀ ಲಕ್ಷ್ಮೀ ನಾರಾಯಣ ಕಜೆಗದ್ದೆ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಆಕರ್ಷಕ ಮೆರವಣಿಗೆ ನಡೆಯಿತು. ಸಾಂಪ್ರದಾಯಿಕ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರ ಸನ್ಮಾನ ನಡೆಯಿತು.
