ಇಷ್ಟು ಅವ್ಯವಸ್ಥೆಗಳಾದರೂ ಸಂಬಂಧವೇ ಇಲ್ಲವೆಂಬಂತೆ ಕುಳಿತಿರುವ ನ.ಪಂ..!

ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ರಸ್ತೆ ಅಗೆದು ಸರಿಯಾಗಿ ಮುಚ್ಚದೇ ಇರುವುದರಿಂದ ದಿನಕ್ಕೊಂದು ಘಟನೆಗಳು ನಡೆಯುತ್ತಿದೆ.

ಎಪಿಎಂಸಿ ಸಮೀಪದ ರಸ್ತೆಯನ್ನು ಕುಡಿಯುವ ನೀರಿನ ಕಾಮಗಾರಿಗಾಗಿ ಕಾಂಕ್ರೀಟ್ ರಸ್ತೆ ಕತ್ತರಿಸಲಾಗಿದ್ದು ಅದರಿಂದ ಹೊರಬಂದಿರುವ ಕಬ್ಬಿಣದ ರಾಡನ್ನು ಸರಿಯಾಗಿ ಕತ್ತರಿಸದೇ ಹಾಗೇ ಬಿಟ್ಟಿರುವುದರಿಂದ ವಿದ್ಯಾರ್ಥಿನಿಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ಆ ರಾಡ್ ಆಕೆಯ ಚಪ್ಪಲಿ ಒಳಗೆ ಹೊಕ್ಕಿ ನೆಲಕ್ಕೆ ಬಿದ್ದಿದ್ದಾರೆ. ಆ ರಸ್ತೆಯಾಗಿ ಬಂದ ರಿಕ್ಷಾ ಚಾಲಕ ಜಗದೀಶ್ ಮೇಲ್ಪುರ ಎಂಬವರು ಕಬ್ಬಿಣ ತಾಗಿ ನೆಲಕ್ಕೆ ಬಿದ್ದಿದ್ದ ಆ ವಿದ್ಯಾರ್ಥಿನಿಯ ಸಹಾಯಕ್ಕೆ ಹೋದರು. ಅಲ್ಲೇ ರಸ್ತೆಯಲ್ಲಿ ಹೊಂಡ ವೊಂದು ಆಗಿದ್ದು ಅಪಾಯವನ್ನು ಕೂಡಾ ಆಹ್ವಾನಿಸುತ್ತಿದೆ.

ನಗರದ ಕೋರ್ಟ್ ಮುಂಭಾಗ ಕಾಂಕ್ರೀಟ್ ರಸ್ತೆ ಅಗೆದು ಕಾಮಗಾರಿ ಸರಿ ಮಾಡದೇ ಹಾಗೇ ಬಿಡಲಾಗಿದೆ. ಗುರುಂಪಿನಲ್ಲಿಯೂ ಇದೇ ಸಮಸ್ಯೆ ಇದೆ. ನಗರದ ಹಲವು ಕಡೆ ರಸ್ತೆ ಅಗೆದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಕುಡಿಯುವ ನೀರಿನ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆ ನಗರಾಡಳಿತದ ಗಮನದಲ್ಲಿದ್ದರೂ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುವಂತೆ ಕಾಣುತ್ತಿಲ್ಲ.

ಕುರುಂಜಿಗುಡ್ಡೆಯಲ್ಲಿ ರಸ್ತೆ ಅಗೆದು ಹೊಂಡವಾಗಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಆಗುತ್ತಿರುವ ಸಮಸ್ಯೆಯನ್ನು ಅರಿತ ಪತ್ರಕರ್ತರೊಬ್ಬರು ಕುಡಿಯುವ ನೀರಿನ ಕಾಮಗಾರಿ ನೋಡಿಕೊಳ್ಳುತ್ತಿರುವ ಇಂಜಿನಿಯರ್ ಗಳಾದ ಅಜಯ್ ಆರ್.ವಿ ಹಾಗೂ ಶ್ರೀಕಾಂತ್ ರಿಗೆ ಫೋನ್ ಮಾಡಿ ಸಮಸ್ಯೆಯ ಕುರಿತು ವಿವರಿಸಿದ ಬಳಿಕ ಇಂದು ಮಧ್ಯಾಹ್ನದ ಗುಂಡಿ ಮುಚ್ಚುವ ಕಾರ್ಯಕ್ಕೆ ಅವರು ಮುಂದಾಗಿರುವುದಾಗಿ ತಿಳಿದುಬಂದಿದೆ.