ವಕ್ಫ್‌ಗೆ ಸೇರಿದ ಆಸ್ತಿಗಳು ಅದು ಸರಕಾರ ನೀಡಿದ ಆಸ್ತಿಯಲ್ಲ. ಮುಸಲ್ಮಾನ ಪೂರ್ವಿಕರು ಮಸೀದಿ ಹಾಗೂ ದಫನ ಭೂಮಿ ಹಾಗೂ ಇನ್ನಿತರ ಧಾರ್ಮಿಕ ಕಲಿಕಾ ಕೇಂದ್ರಗಳನ್ನು ನಿರ್ಮಿಸಲು ನೀಡಿದ ಆಸ್ತಿಯಾಗಿದೆ. ಪ್ರತಿ ಬಾರಿಯೂ ಬಿಜೆಪಿ ಸರಕಾರ ಮುಸಲ್ಮಾನರ ಮೇಲೆ ಒಂದಲ್ಲ ಒಂದು ರೀತಿಯ ಕಾನೂನುಗಳನ್ನು ತಿದ್ದುಪಡಿ ಮಾಡಿ ದಬ್ಬಾಳಿಕೆಯನ್ನು ಮಾಡುತ್ತಿರುವುದು ಅವರಿಗೆ ಸಹಜವಾಗಿದೆ. ಇದನ್ನು ಯಾವುದೇ ಮುಸಲ್ಮಾನರು ಅಥವಾ ಸಮಾನ ಮನಸ್ಕರು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆಯನ್ನು ಖಂಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾನೂನು ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಜನರು ಸ್ವ ಇಚ್ಛೆಯಿಂದ ದೇವರ ಬಳಿ ಪುಣ್ಯ ಪ್ರಾಪ್ತಿಸಿಕೊಳ್ಳಲು ತಮ್ಮ ಆಸ್ತಿಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಾರೆ. ಅದನ್ನು ನೋಡಿಕೊಳ್ಳಲು ಸಂಬಂಧಪಟ್ಟ ವಕ್ಫ್ ಇಲಾಖೆ ಇದ್ದು ಅದರ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿರುತ್ತದೆ. ಆದರೆ ಇದೀಗ ಕೇಂದ್ರ ಸರಕಾರವು ಮುಸಲ್ಮಾನರ ಧಾರ್ಮಿಕ ಕೇಂದ್ರಗಳ ಸಮಿತಿಗೆ ಇತರ ಧರ್ಮದವರನ್ನು ಕೂಡ ಸದಸ್ಯರಾಗಿ ಸೇರಿಕೊಳ್ಳಬೇಕೆಂಬುದು ಇದು ಎಷ್ಟು ಸರಿ. ಹಾಗದರೆ ಎಲ್ಲಾ ಧರ್ಮದ ಸಮಿತಿಗಳಲ್ಲಿಯೂ ಕೂಡ ಎಲ್ಲಾ ಧರ್ಮದವರನ್ನು ಸೇರಿಕೊಳ್ಳಲು ಅವರು ಸಿದ್ಧರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಆದ್ದರಿಂದ ಬಿಜೆಪಿ ಪ್ರತೀ ಬಾರಿಯೂ ದೇಶದ ಜನತೆಯನ್ನು ಒಡೆದು ಆಳುವ ನೀತಿಯನ್ನು ಪಾಲಿಸುತ್ತಿದೆ. ಒಟ್ಟಿನಲ್ಲಿ ಅವರಿಗೆ ಮುಸಲ್ಮಾನರನ್ನು ಬೇರೆ ಬೇರೆ ರೀತಿಯ ಕಾನೂನುಗಳನ್ನು ತಂದು ಧಮನಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆಯೇ ವಿನಹಃ ದೇಶದ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದು ಹೇಳಿದರು.
ಸುಳ್ಯ ತಾಲೂಕಿನಲ್ಲಿಯೂ ಕೂಡ ಪೇರಡ್ಕ ತೆಕ್ಕಿಲ್ ಕುಟುಂಬ, ಗುತ್ತಿಗಾರಿನಲ್ಲಿ ಅಹಮ್ಮದ್ ಸಾಹೇಬರ ಕುಟುಂಬ ಸುಮಾರು ಎಕರೆ ಜಾಗಗಳನ್ನು ಮಸೀದಿಗಳಿಗೆ ವಕ್ಫ್ ಮಾಡಿಕೊಟ್ಟಿದೆ. ಇದರಿಂದ ಬರುವ ಆದಾಯದಿಂದಲೇ ಅಲ್ಲಿಯ ಧಾರ್ಮಿಕ ಕೇಂದ್ರಗಳು ಮದರಸ ಮಕ್ಕಳ ಶಿಕ್ಷಣ ಇನ್ನಿತರ ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಅದಲ್ಲದೇ ಸರಕಾರದಿಂದ ಯಾವುದೇ ರೀತಿಯ ಅನುದಾನಗಳು ಮಸೀದಿಗೆ ಬರುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಮಹಮ್ಮದ್ ಇಕ್ಬಾಲ್ ಎಲಿಮಲೆ ಮಾತನಾಡಿ, ನಮ್ಮ ಪೂರ್ವಿಕರು ಪರಲೋಕ ಮೋಕ್ಷಕ್ಕಾಗಿ ತಮ್ಮ ಆಸ್ತಿ ಪಾಸ್ತಿಗಳ ಮಸೀದಿಗಳಿಗೆ ದಾನ ಮಾಡುತ್ತಾರೆ. ಅಂತಹ ಆಸ್ತಿಗಳನ್ನು ಲಪಟಾಯಿಸಲು ಮತ್ತು ಅದನ್ನು ಪಡೆದು ಬೇರೆ ಉದ್ಯಮಿಗಳಿಗೆ ಹಂಚುವ ಪ್ರಯತ್ನಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿರುವುದು ಸರಿಯಾದ ನೀತಿಯಲ್ಲ. ಅದ್ದರಿಂದ ಈ ಮೊದಲು ಎನ್‌ಆರ್‌ಸಿ ಸಿಎಎ ಕಾನೂನುಗಳನ್ನು ಜಾರಿಗೆ ತಂದಾಗ ಮುಸಲ್ಮಾನರು ಮತ್ತು ಸಮಾನ ಮನಸ್ಕರರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ ರೀತಿಯಲ್ಲಿ ನಾವು ಇದಕ್ಕಾಗಿ ಮುಂದೆ ಬೃಹತ್ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ, ದೇಶದ ಸಂವಿಧಾನ ಮತ್ತು ನ್ಯಾಯಾಲಯದ ಬಗ್ಗೆ ನಮಗೆ ವಿಶ್ವಾಸವಿದ್ದು ಬಿಜೆಪಿಯವರು ಈ ರೀತಿಯ ಯಾವುದೇ ಕುತಂತ್ರಗಳನ್ನು ಮಾಡಿದರೂ ನ್ಯಾಯ ದೇಗುಲದಲ್ಲಿ ಸತ್ಯಕ್ಕೆ ಜಯ ಸಿಗುವುದು ಖಂಡಿತ ಎಂಬ ವಿಶ್ವಾಸ ನಮಗೆ ಇದೆ. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಲೋಕಸಭಾ ಚುನಾವಣೆಗೆ ಇಳಿದಿದ್ದ ಮೋದಿಯವರಿಗೆ ದೇಶದ ಜನತೆ ಸರಿಯಾದ ಉತ್ತರವನ್ನು ನೀಡಿದ್ದು, ಇದರಿಂದ ಕಕ್ಕಾಬಿಕ್ಕಿಯಾಗಿರುವ ಅವರು ದೇಶದ ಮುಸಲ್ಮಾನರ ಮೇಲೆ ದಬ್ಬಾಳಿಕೆಯನ್ನು ಮಾಡಲು ಈ ಮಸೂದೆಯನ್ನು ತಿದ್ದುಪಡಿ ಮಾಡುವ ಮೂಲಕ ಮತ್ತೊಮ್ಮೆ ಪ್ರಾರಂಭಿಸಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ನಾಮನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೊ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖಂಡ ಅಬ್ಬಾಸ್ ಅಜ್ಜಾವರ ಉಪಸ್ಥಿತರಿದ್ದರು.