ಕ್ಯೂಆರ್ ಕೋಡ್ ಮೂಲಕ ದಂಡ ಕಟ್ಟಿದ ಶಿಕ್ಷಕರು
ಶಾಲಾ ಪ್ರವಾಸದ ಸಂದರ್ಭದಲ್ಲಿ ರಸ್ತೆ ಬದಿ ಬಸ್ ನಿಲ್ಲಿಸಿ ಮಕ್ಕಳಿಗೆ ಆಹಾರ ನೀಡಿ ಅದರ ಪ್ಲಾಸ್ಟಿಕ್ ಮತ್ತು ಹಾಳೆತಟ್ಟೆಗಳನ್ನು ರಸ್ತೆಬದಿಯಲ್ಲಿ ಎಸೆದು ಹೋದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿಯ ಶಾಲೆಯೊಂದರ ಶಿಕ್ಷಕರು ಸಂಪಾಜೆ ಗ್ರಾ.ಪಂ.ಗೆ ರೂ. 5 ಸಾವಿರ ದಂಡ ಕಟ್ಟಿದ್ದಾರೆ.









ಬೆಳ್ತಂಗಡಿ ತಾಲೂಕಿನ ಶಾಲೆಯೊಂದರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಡಿಕೇರಿ ಮೈಸೂರು ಕಡೆಗೆ ಬಸ್ಸಲ್ಲಿ ಪ್ರವಾಸ ಹೋಗಿದ್ದಾಗ ಕಲ್ಲುಗುಂಡಿ ಸಮೀಪದ ಕಡಪಾಲ ಸೇತುವೆಯ ಬಳಿ ಮಕ್ಕಳಿಗೆ ಆಹಾರ ನೀಡಿ ಅದನ್ನು ಕಟ್ಟಿ ತಂದಿದ್ದ ಪ್ಲಾಸ್ಟಿಕ್, ಕಾಗದ, ಹಾಳೆತಟ್ಟೆಗಳನ್ನು ಅಲ್ಲೇ ಬಿಸಾಡಿದ್ದರು. ಸ್ಥಳೀಯರೊಬ್ಬರು ಕಸ ಅಲ್ಲಿ ಹಾಕದಂತೆ ಹೇಳಿದರೂ ಶಿಕ್ಷಕರು ಕಿವಿಗೊಡದೆ ಮುಂದಕ್ಕೆ ಹೋಗಿದ್ದರು. ಬಳಿಕ ಶಾಲೆಯವರು ಕಸವನ್ನು ಅಲ್ಲೇ ಎಸೆದು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಸಂಪಾಜೆ ಗ್ರಾಮ ಪಂಚಾಯತ್ ನವರು ಆ ಶಾಲೆಗೆ 5 ಸಾವಿರ ರೂ. ದಂಡ ವಿಧಿಸಿ, ಅದನ್ನು ಕಟ್ಟುವಂತೆ ಫೋನ್ ಮೂಲಕ ತಾಕೀತು ಮಾಡಿದ್ದರಲ್ಲದೆ , ದಂಡ ಪಾವತಿಗಾಗಿ ಸಂಪಾಜೆ ಗ್ರಾ.ಪಂ. ನ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಕೂಡ ಕಳಿಸಿದ್ದರು.
ಆದರೆ ಶಾಲೆಯವರು, ಸೋಮವಾರ ಸಂಪಾಜೆಗೆ ಬರುವುದಾಗಿ ಪಿ.ಡಿ.ಒ.ರೊಡನೆ ಹೇಳಿದ್ದರು. ಒಪ್ಪಿಕೊಂಡಂತೆ ಇವತ್ತು ಶಾಲೆಯವರು
ಸಂಪಾಜೆ ಪಂಚಾಯತ್ ಗೆ ಬರಬೇಕಿತ್ತು. ಅವರು ಬಾರದಿದ್ದುದನ್ನು ಕಂಡ ಪಂಚಾಯತ್ ನವರು ಆ ಶಾಲೆಗೆ ಫೋನ್ ಮಾಡಿದರೆನ್ನಲಾಗಿದೆ. ಪರಿಣಾಮವಾಗಿ ಶಾಲೆಯವರು, ಪಂಚಾಯತ್ ಕಳುಹಿಸಿಕೊಟ್ಟಿದ್ದ ಕ್ಯೂಆರ್ ಕೋಡ್ ಗೆ ರೂ. 5000 ದಂಡದ ರೂಪದಲ್ಲಿ ಹಾಕಿದ್ದಾರೆಂದು ಸಂಪಾಜೆ ಗ್ರಾ.ಪಂ. ಪಿ.ಡಿ.ಒ. ಸರಿಟಾ ಓಲ್ಗಾ ಡಿಸೋಜ ತಿಳಿಸಿದ್ದಾರೆ.ಪಂಚಾಯಿತಿಯವರು ದಂಡ ಪಾವತಿ ರಸಿದಿಯನ್ನು ಶಾಲೆಯವರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾರೆ.










