ಸಂಪರ್ಕಕ್ಕೆ ಅಯೋಗ್ಯ ವಾದ ಎಡಮಂಗಲದ ಪುಚ್ಚಾಜೆ-ಪರ್ಲ ರಸ್ತೆ, ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ದುರಸ್ತಿಯ ಭರವಸೆ

0

ಎಡಮಂಗಲ ಗ್ರಾ.ಪಂ. ವ್ಯಾಪ್ತಿಯ ಎಡಮಂಗಲ ಪುಚ್ಚಾಜೆ-ಪರ್ಲ ರಸ್ತೆ ಆ. 13ರಂದು ಸುರಿದ ಮಳೆಗೆ‌ ಹಾನಿಯಾಗಿ, ಸಂಚಾರಕ್ಕೆ ಅಯೋಗ್ಯವಾಗಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ದುರಸ್ತಿಯ ಭರವಸೆ ನೀಡಿದ ಘಟನೆ ಆ. 16ರಂದು ನಡೆದಿದೆ.


ರಸ್ತೆ ತೀವ್ರ ಹದಗೆಟ್ಟಿರುವ ಕಾರಣದಿಂದ ನಡೆದು ಹೋಗಲೂ ಕಷ್ಟಪಡುವಂತಾಗಿದೆ. ದಿನನಿತ್ಯ ವಾಹನ ಸವಾರರು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಬೇಕಾದರೆ ಹೊತ್ತುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಸುಮಾರು 20 ಮನೆಗಳು ಇದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರೂ ಇದ್ದಾರೆ.

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ದುರಸ್ತಿಯ ಭರವಸೆ

ಸುಮಾರು 50 ವರ್ಷಗಳಿಂದಲೂ ಈ ರಸ್ತೆಯ ಪರಿಸ್ಥಿತಿ ಹೀಗೆ ಇರುವುದರಿಂದ ಗ್ರಾಮಸ್ಥರು ಶಾಸಕಿ ಭಾಗೀರಥಿ ಮುರುಳ್ಯರಲ್ಲಿ ರಸ್ತೆಯನ್ನು ವೀಕ್ಷಿಸಿ ಅನುದಾನವನ್ನು ಒದಗಿಸಬೇಕೆಂದು ಬೇಡಿಕೆ ಇಟ್ಟ ಮೇರೆಗೆ ಆ. 16ರಂದು ಶಾಸಕಿ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಮಾಡಿಕೊಡುವ ಭರವಸೆಯನ್ನು ನೀಡಿದರೆಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಆಗಮಿಸಿದ ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು ರವರೂ ದುರಸ್ತಿ ಪಡಿಸುವ‌ ಭರವಸೆಯನ್ನು ನೀಡಿರುವುದಾಗಿ ಆ ಭಾಗದ ಫಲಾನುಭವಿ ಗಿರೀಶ್ ಪರ್ಲ ತಿಳಿಸಿದ್ದಾರೆ. ರಸ್ತೆಯ ಫಲಾನುಭವಿಗಳು, ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.