ಉಬರಡ್ಕದಲ್ಲಿ 75 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ ವೀರಭದ್ರ ದೇವಸ್ಥಾನ

0

ಉಬರಡ್ಕ ಗ್ರಾಮದ ಹುಳಿಯಡ್ಕದಲ್ಲಿ ವೀರಭದ್ರ ದೇವರ ಭಂಡಾರ ಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ವೀರಭದ್ರ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ವೀರಭದ್ರ ದೇವಸ್ಥಾನವು ರೂ.75 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ ಎಂದು ವೀರಭದ್ರ ದೇವರ ಭಂಡಾರಮನೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಿಮಕರ ಮಂಡೆಕೋಲು, ಮಡಿವಾಳ ಸಂಘದ ಕಾರ್ಯದರ್ಶಿ ಜನಾರ್ದನ ಚೊಕ್ಕಾಡಿ, ಪುಟ್ಟಣ್ಣ ಮಡಿವಾಳ ಮಂಡೆಕೋಲು ತಿಳಿಸಿದ್ದಾರೆ.

ಸೆ.30ರಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತು ಮಾಹಿತಿ ನೀಡಿದರು.

ಉಬರಡ್ಕ ಗ್ರಾಮದ ಹುಳಿಯಡ್ಕದಲ್ಲಿ ಮುನ್ನೂರು ವರುಷಗಳ ಇತಿಹಾಸವಿರುವ ಶ್ರೀ ವೀರಭದ್ರ ದೇವರನ್ನು ಸುಳ್ಯ ತಾಲೂಕಿನ ಮಡಿವಾಳ ಸಮಾಜ ಬಾಂಧವರು ಆರಾದಿಸಿಕೊಂಡು ಬರುತ್ತಿದ್ದು, ಶ್ರೀ ವೀರಭದ್ರ ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸುವುದೆಂದು ಸಮಿತಿ ಸದಸ್ಯರ ಪ್ರಕಾರ ಅಷ್ಟಮಂಗಲ ಪ್ರಶ್ನೆಯನ್ನು ಜ್ಯೋತಿಷ್ಯರಾದ ಉದಯ ನಾಯ‌ರ್ ಇವರ ಮೂಲಕ ನಡೆಸಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಹುಳಿಯಡ್ಕ ದಿ. ಶ್ರೀಮತಿ ಮತ್ತು ಸುಬ್ಬು ಮಡಿವಾಳರ ಕುಟುಂಬಸ್ಥರು 0.36 ಎಕ್ರೆ ಸ್ಥಳವನ್ನು ದಾನಪತ್ರದ ಮೂಲಕ ವೀರಭದ್ರ ದೇವರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರ ಮಾಡಿರುತ್ತಾರೆ.

ಈ ಸ್ಥಳದಲ್ಲಿ ಎಲ್ಲಾ ಪರಿಹಾರ ದೋಷ ನಿವಾರಣೆಗಳನ್ನು ಶಾಸ್ರೋಕ್ತವಾಗಿ ಮುಗಿಸಿ ದಿನಾಂಕ 09-03-2023 ರಂದು ವೀರಭದ್ರ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿಯವರು ಮತ್ತು ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ರವೀಶ್ ತಂತ್ರಿಯವರ ನೇತೃತ್ವದಲ್ಲಿ ದಿನಾಂಕ 22-03-2023 ರಂದು ಸ್ಥಳ ಶುದ್ಧಿ ಹಾಗೂ ಭೂಮಿ ಪೂಜೆ ನೆರವೇರಿಸಲಾಯಿತು. ವೀರಭದ್ರ ದೇವರ ದೇವಸ್ಥಾನ, ಭಂಡಾರದ ಮನೆ ಹಾಗೂ ನಾಗದೇವರ ಕಟ್ಟೆಯನ್ನು ವಾಸ್ತು ಶಿಲ್ಪಿ ಚೊಕ್ಕಾಡಿ ಅಪ್ಪಯ್ಯ ಆಚಾರಿಯವರ ನಿರ್ದೇಶನದಂತೆ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ವೀರಭದ್ರ ದೇವರ ದೇವಸ್ಥಾನ, ಭಂಡಾರ ಮನೆ ಹಾಗೂ ನಾಗದೇವರ ಕಟ್ಟೆಯ ಕೆಲಸವು ಶೇಕಡಾ 60 ರಷ್ಟು ಆಗಿರುತ್ತದೆ. ಇದರೊಂದಿಗೆ ಸುತ್ತು ಆವರಣ ಗೋಡೆ, ನೆಲ ಹಾಸು, ಶಾಶ್ವತ ಚಪ್ಪರ, ಸುಳ್ಯ-ಉಬರಡ್ಕ ರಸ್ತೆಯಿಂದ ದೇವಸ್ಥಾನಕ್ಕೆ ಹೋಗುವ ಮಾರ್ಗ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಅಂದಾಜು ರೂ. 75,00,000.00 (ರೂಪಾಯಿ ಎಪ್ಪತ್ತೈದು ಲಕ್ಷ) ಭಕ್ತಾದಿಗಳ ಉದಾರ ದೇಣಿಗೆ ಮತ್ತು ಸಹಕಾರದಿಂದಲೇ ಪಡೆಯಬೇಕಾಗಿದೆ ಎಂದವರು‌ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉಮೇಶ್ ಮಡಿವಾಳ ಹುಳಿಯಡ್ಕ, ಮಡಿವಾಳ ಸಂಘದ ಅಧ್ಯಕ್ಷ ಲೋಕೇಶ್ ಮಡಿವಾಳ ಏನೆಕಲ್ಲು, ಪ್ರಮುಖರಾದ ಆನಂದ ಹೆಚ್ ಹಲಸಿನಡ್ಕ, ಹೇಮಕುಮಾರ್ ಹುಳಿಯಡ್ಕ, ಯಶೋಧರ ಇದ್ದರು.