ಸುಳ್ಯದ ಶ್ರೀ ಶಾರದಾಂಬ ದಸರಾ -2024

0

ಸುಳ್ಯದ ಮೊಟ್ಟಮೊದಲ ಮಹಿಳಾ ದಸರಾದಲ್ಲಿ ಇಪ್ಪತ್ತಕ್ಕೂ ಅಧಿಕ ಸ್ಟಾಲ್ ಗಳು

ಮಹಿಳೆಯರಿಂದ ವಿವಿಧ ಖಾದ್ಯಗಳ ತಯಾರಿ – ಪ್ರದರ್ಶನ ಮತ್ತು ಮಾರಾಟ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024ರ ಅಂಗವಾಗಿ ಈ ಬಾರಿ ವಿಶೇಷ ಮಹಿಳಾ ದಸರಾ -2024 ಅ.12ರಂದು ಬೆಳಿಗ್ಗೆ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಉದ್ಘಾಟನೆಗೊಂಡಿತು.

ಮಹಿಳಾ ದಸರಾವನ್ನು ಹಿರಿಯರಾದ ಶ್ರೀಮತಿ ನಳಿನಿ ಕೃಷ್ಣ ಕಾಮತ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ, ಶ್ರೀ ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಕಾರ್ಯದರ್ಶಿ ಶ್ರೀದೇವಿ ನಾಗರಾಜ್ ಭಟ್, ಮಹಿಳಾ ಸಮಿತಿಯ ಗೌರವ ಸಲಹೆಗಾರರುಗಳಾದ ಡಾ. ಯಶೋದಾ ರಾಮಚಂದ್ರ, ಶ್ರೀಮತಿ ಲತಾ ಮಧುಸೂದನ್ ಸೇರಿದಂತೆ ಶ್ರೀ ಶಾರದಾಂಬ ಮಹಿಳಾ ಸಮಿತಿಯ ಗೌರವ ಸದಸ್ಯರುಗಳು ಉಪಸ್ಥಿತರಿದ್ದರು.

ಮಹಿಳಾ ದಸರಾದಲ್ಲಿ ವಿಶೇಷವಾಗಿ ತಾಲೂಕಿನ ಮಹಿಳೆಯರಿಂದ ಮನೆಯಲ್ಲಿ ತಯಾರಿಸಿದ ವಿವಿಧ ಆಹಾರ ಖಾದ್ಯಗಳು, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು.

ಮಹಿಳಾ ದಸರಾದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಸ್ಟಾಲ್ ಗಳಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹದಿಮೂರು ಸ್ಟಾಲ್ ಗಳಿದ್ದವು.
ಇದರಲ್ಲಿ ಗುಲಾಬಿ ಹೂವಿನ ಗಿಡಗಳು, ಬಟ್ಟೆ ಅಂಗಡಿ, ಜೇನಿನ ಉತ್ಪನ್ನಗಳು, ಕತ್ತಿ , ಬ್ಯಾಗ್, ಚರುಮುರಿ, ಜ್ಯೂಸ್ ಐಟಂಗಳು ಸೇರಿದಂತೆ ತಿಂಡಿ – ತಿನಿಸುಗಳು, ಡ್ರೈಪ್ರೂಟ್ಸ್, ಮಕ್ಕಳ ಆಟಿಕೆಗಳು,ವಿವಿಧ ಪುಸ್ತಕಗಳು, ಆರ್ಗಾನಿಕ್ ಸಾಬೂನುಗಳು, ಪಾರಂಪರಿಕ ಕೃಷಿ ಉತ್ಪನ್ನಗಳು, ತರಕಾರಿಗಳಾದ ಮರಕೆಸು, ಕೇನೆ, ಮಾವಿನಕಾಯಿ, ಶುಂಠಿ, ತಿಮರೆ, ಅರಶಿನ ಎಲೆ, ಬಡ್ಡುಹುಳಿ, ಗಾಂದಾರಿ ಮೆಣಸು, ಹಿಡಿಸೂಡಿ, ವೀಳ್ಯದ ಎಲೆ ಸೇರಿದಂತೆ ವಿವಿಧ ಗ್ರಾಮೀಣ ಸೊಗಡಿನ ಐಟಂಗಳು ಇದ್ದವು.

ಮಹಿಳಾ ದಸರಾ ಪ್ರಯುಕ್ತ ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.