ಬದುಕು ನಿಲ್ಲಿಸಿದ ಬಸ್  ನಿರ್ವಾಹಕನ  ದುರಂತ ಅಂತ್ಯ…

0

ವಿಧಿಯ ಲೀಲೆಗೆ ಬಲಿಯಾಗಿ ಬದುಕಿನ‌ ಜಟಕಾ ಬಂಡಿ ನಿಲ್ಲಿಸಿದ ಗುರು

ಎಂದಿನಂತೆಯೇ ಬೆಳಗ್ಗೆ ಎದ್ದು ಬಂದು ಸಮಯಕ್ಕೆ ಸರಿಯಾಗಿ ಹೊರಡುವ ಬಂಡಿಯಲ್ಲಿ ನಿತ್ಯದ ಕಾಯಕದಲ್ಲಿ ತೊಡಗಿಸಿಕೊಂಡ ಹದಿಹರೆಯದ ಯುವಕನೋರ್ವ ಸಾವಿನ ಮುನ್ಸೂಚನೆಯೇ ಇಲ್ಲದೆ ಇಹಲೋಕ ತ್ಯಜಿಸಿ ಪರಲೋಕ ಸೇರಿದ ದಾರುಣ ಘಟನೆ ಇಡೀ ಜನಸಮೂಹವನ್ನು ದಿಗ್ಭ್ರಮೆಗೊಳಿಸಿತು.

ಸುಳ್ಯದ ಸೀಮಾಧಿಪತಿಯಾದ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅದೆಷ್ಟೋ ಭಕ್ತಾದಿಗಳನ್ನು ಹೊತ್ತೊಯ್ಯುವ ಅವಿನಾಶ್ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುವ ಆಲೆಟ್ಟಿಯ ಗುರುಪ್ರಸಾದ್ ಕುಂಚಡ್ಕ ಆಕಸ್ಮಿಕವಾಗಿ ಮೃತ್ಯುಗೀಡಾದ ಯುವಕ.

ದಿನ ನಿತ್ಯ ನೂರಾರು ಮಂದಿ ಪರಿಚಿತ ಹಾಗೂ ಅಪರಿಚಿತರನ್ನು ತನ್ನ ನಗು ಮುಖದ ಸೇವೆಯೊಂದಿಗೆ
ಬಸ್ಸಿನ ನಿರ್ವಾಹಕ ಹುದ್ದೆಯನ್ನು ನಿರ್ವಹಿಸಿಕೊಂಡು ಪರೋಪಕಾರಿ ಮನೋಭಾವ ಹೊಂದಿದವರಾಗಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ಸಾವಿನ ಹಿಂದಿನ ದಿನ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೋರ್ವರ ಅಮೂಲ್ಯವಾದ ದಾಖಲೆ ಪತ್ರವಿದ್ದ ಬಿದ್ದು ಸಿಕ್ಕಿದ ಪರ್ಸನ್ನು ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ಸುದ್ದಿ ಪತ್ರಿಕೆ ವರದಿಗಾರರನ್ನು ಸಂಪರ್ಕಿಸಿ ಬಿದ್ದು ಸಿಕ್ಕಿದ ಪರ್ಸಿನ ವಿವರವನ್ನು ಭಾವಚಿತ್ರದೊಂದಿಗೆ ಕಳುಹಿಸಿ ವರದಿ ಪ್ರಕಟಿಸುವಂತೆ ಕೋರಿಕೊಂಡಿದ್ದರು. ವಾರಸುದಾರರು ಬಂದಲ್ಲಿ ಅದನ್ನು ನಾನು ಹಿಂತಿರುಗಿಸುತ್ತೇನೆ ಎಂದುತಿಳಿಸಿದ್ದರು. ಇದು ಗುರುಪ್ರಸಾದ್ ಪರೋಪಕಾರಿ ಮಾನವೀಯತೆಯ ಸದ್ಗುಣಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಮತ್ತೊಬ್ಬರ ಸಮಸ್ಯೆಯನ್ನು ಅರಿತು ತನ್ನಿಂದಾಗುವ ಸಹಾಯ ಮಾಡುವ ಮನಸ್ಸು ಆತನಲ್ಲಿರುವುದಕ್ಕೆ ಕೊನೆಯ ಕ್ಷಣದ ಒಂದು‌ ಜೀವಂತ ಸಾಕ್ಷಿಯಾಗಿದೆ.

ಗುರುಪ್ರಸಾದ್ ರವರು ನೀಡಿದ ಮಾಹಿತಿಯಂತೆ ಸುದ್ದಿ ವೆಬ್ ಸೈಟ್ ನಲ್ಲಿ ಬಿದ್ದು ಸಿಕ್ಕಿದ ಪರ್ಸಿನ ವಿಷಯವನ್ನು ಫೋಟೋ ಸಮೇತ ವರದಿ ರಾತ್ರಿ ವೇಳೆಯಲ್ಲಿ ಪ್ರಕಟಿಸಲಾಯಿತು. ವರದಿ ಗಮನಿಸಿದ ಪರ್ಸಿನ ವಾರಸುದಾರರು ಮರುದಿನ ಬೆಳಗ್ಗೆ ಸುದ್ದಿ ಕಚೇರಿಗೆ ಬಂದು ಪರ್ಸ್ ಕಳೆದುಕೊಂಡಿರುವ ಬಗ್ಗೆ ವಿವರ ತಿಳಿಸಿದರು. ಈ ಬಗ್ಗೆ ಸುದ್ದಿ ವರದಿಗಾರರು ಗುರುಪ್ರಸಾದ್ ರವರ ದೂರವಾಣಿಗೆ ಕರೆ ಮಾಡಿದಾಗ ಅವರು ಮೊಬೈಲ್ ಫೋನ್ ಮನೆಯಲ್ಲಿ ಮರೆತು ಹೋದದ್ದರಿಂದ ಅವರ ಪತ್ನಿ ಫೋನ್ ರಿಸಿವ್ ಮಾಡಿದರು. ಅವರಲ್ಲಿ ಗುರುಪ್ರಸಾದ್ ಕೆಲಸ ಮಾಡುವ ಬಸ್ಸಿನ ಚಾಲಕರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ವರದಿಗಾರರು ಫೋನ್ ಮಾಡಿದರು. ಬಸ್ಸಿನಲ್ಲಿ ಸಂಚರಿಸುತ್ತಿರುವ ವೇಳೆಯಲ್ಲಿ
ಗುರುಪ್ರಸಾದ್ ರವರ ಜತೆ ಪರ್ಸಿನ ಬಗ್ಗೆ ವಾರಸುದಾರರು ಬಂದಿದ್ದಾರೆ ಎಂದು ತಿಳಿಸಿದರು. ಅದಕ್ಕೆ ಉತ್ತರಿಸಿದ ಗುರು
ನಾನು ಈಗ ತೊಡಿಕಾನಕ್ಕೆ ಹೋಗುತ್ತಿದ್ದೇನೆ ಹಿಂತಿರುಗಿ ಸುಳ್ಯಕ್ಕೆ ಬಂದು ಪರ್ಸನ್ನು ಸುದ್ದಿ ಕಚೇರಿಗೆ ತಂದು ಕೊಡುತ್ತೇನೆ ಎಂದು ಹೇಳಿದ್ದರು.
ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಮತ್ತೊಬ್ಬರ ಸಹಾಯಕ್ಕೆ ಬರುತ್ತೇನೆ ಎಂದು ಹೇಳಿದ ಗುರು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು.


ಹೌದು ಇಷ್ಟೆಲ್ಲಾ
ಮಾತುಕತೆ ನಡೆಸಿ ಕೇವಲ 30 ನಿಮಿಷ ಕಳೆಯುವಷ್ಟರಲ್ಲಿ ಮತ್ತೊಂದು ಕರೆ ಬರುವುದು. ಅವಿನಾಶ್ ಬಸ್ಸಿನ ನಿರ್ವಾಹಕ ಗುರುಪ್ರಸಾದ್ ರವರು ಸಾವಿಗೀಡಾದರು ಎಂಬ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಪಸರಿಸಿತು. ಸುದ್ದಿ ಹರಡುತ್ತಿದ್ದಂತೆ ಬಹಳಷ್ಟು ಮಂದಿ ಸಾವಿನ ಕುರಿತು ಮರುಕ ವ್ಯಕ್ತಪಡಿಸಿದರು.

ಚಲಿಸುತ್ತಿದ್ದ ವಾಹನದಲ್ಲಿ ಯೇ ಬದುಕಿಗೆ ಅಂತ್ಯ
ಹಾಡಿದ ಓರ್ವ ಮಾನವೀಯ ವ್ಯಕ್ತಿತ್ವದ ಯುವಕನ ಸಾವು ನಂಬಲು ಸಾಧ್ಯವಿಲ್ಲ ದಂತಾಯಿತು.


ನಾವು ಎಷ್ಟೇ
ಪ್ರಾಮಾಣಿಕನಾಗಿ ಒಳ್ಳೆಯವರಾಗಿದ್ದರೂ
ವಿಧಿಯ ಲೀಲೆಗೆ ಒಂದಲ್ಲ ಒಂದು ದಿನ ನಾವೆಲ್ಲರೂ ತಲೆ ಬಾಗಲಬೇಕಲ್ಲವೇ… ಇದುವೇ ಹಣೆಯ ಬರಹ..