ದಾರ್ಷ್ಟ್ಯದ ವರ್ತನೆ ತೋರಿದುದಕ್ಕೆ ಎಚ್ಚರಿಕೆ ನೀಡಿದ್ದೇನೆ ಅಷ್ಟೆ : ನ.ಪಂ.ಅಧ್ಯಕ್ಷರ ಸ್ಪಷ್ಟನೆ

0

ನಗರ ಪಂಚಾಯತ್ ನಲ್ಲಿರುವ ವಿಕಲ ಚೇತನ ಕಾರ್ಯಕರ್ತ ಪ್ರವೀಣ್ ಎಂಬವರು ಕಚೇರಿಯ ಹಲವು ಸಿಬ್ಬಂದಿಗಳಲ್ಲಿ ದಾರ್ಷ್ಟ್ಯದ ವರ್ತನೆ ತೋರುತ್ತಿದ್ದರು. ಆ ಬಗ್ಗೆ ನನಗೆ ಲಿಖಿತ ದೂರುಗಳೂ ಬಂದಿವೆ. ಅದನ್ನು ಪರಿಶೀಲಿಸಿ ವರದಿ ಸಲ್ಲಿಸಲು ನಾನು ಸೂಚನೆ ನೀಡಿದ್ದೇನೆ. ಅದಕ್ಕಾಗಿ ನನ್ನ ಮೇಲೆ ಅವರಿಗೆ ಕೋಪ ಇದೆಯೆಂದು ಕಾಣುತ್ತದೆ. ನಿನ್ನೆ ನಾವು ಕೊಠಡಿಯೊಂದನ್ನು ನಿರ್ಮಿಸುವ ವಿಚಾರವಾಗಿ ಮುಖ್ಯಾಧಿಕಾರಿಯವರೊಂದಿಗೆ ಮಾತನಾಡುತ್ತಿದ್ದಾಗ ಇವರು ಬಂದು ಮುಖ್ಯಾಧಿಕಾರಿಯವರೊಡನೆ ಮಾತನಾಡತೊಡಗಿದರು. ನಮಗೆ ತಡವಾಗುತ್ತಿದ್ದುದರಿಂದ ನಾನು ಮುಖ್ಯಾಧಿಕಾರಿಯವರೊಡನೆ, ” ಸರ್, ನೀವು ಅವರೊಡನೆ ಮತ್ತೆ ಮಾತನಾಡಿ. ನಾವು ಚರ್ಚಿಸುತ್ತಿದ್ದ ವಿಷಯ ಮೊದಲು ಮುಗಿಸಿಕೊಳ್ಳಿ ” ಎಂದು ಹೇಳಿದೆ. ಆಗ ಆ ವ್ಯಕ್ತಿ ” ನಾನು ಮಾತಾಡುತ್ತಿರುವಾಗ ನೀವು ಕರೆಯುವುದೇಕೆ ? ನೀವು ಅಧ್ಯಕ್ಷರಾದರೆ ನಿಮಗಾಯಿತು ” ಎಂದು ನನ್ನೊಡನೆಯೂ ಉದ್ದಟತನದ ಮಾತಾಡಿದರು. ಅದಕ್ಕಾಗಿ ನಾನು ಎಚ್ಚರಿಕೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಡಿ.ಸಿ.ಯವರೊಡನೆ ನಮಗೂ ಹೇಳಲು ಗೊತ್ತಿದೆ ಎಂದು ಹೇಳಿದ್ದೇನೆ ಅಷ್ಟೆ. ಅದಕ್ಕಾಗಿ ಡಿ.ಸಿ.ಗೆ ದೂರು ನೀಡಿದ್ದಾರೆ. ಇಲ್ಲಿ ನಾವು ಯಾರಿಗೂ ಕಿರುಕುಳ ನೀಡಲು ಕುಳಿತಿಲ್ಲ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಉತ್ತಮ ರೀತಿಯಲ್ಲಿ ಆಗಬೇಕೆಂಬುದಷ್ಟೆ ನಮ್ಮ ಕಾಳಜಿ ” ಎಂದು ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಹೇಳಿದ್ದಾರೆ.