ಮಾಸ್ ಸಂಸ್ಥೆ ಕೃಷಿಕರ ಪಾಲಿಗೆ ವರದಾನವಾಗಿದೆ – ಕು. ಭಾಗೀರಥಿ ಮುರುಳ್ಯ
ಹಳದಿರೋಗ, ಎಲೆಚುಕ್ಕಿ ರೋಗಗಳಿಂದ ಕಂಗೆಟ್ಟ ರೈತರ ಪಾಲಿಗೆ ಮಾಸ್ ವರದಾನವಾಗಿದೆ. ಸ್ಥಳೀಯ ಕೃಷಿಕರು ತಮ್ಮ ಅಡಿಕೆಯನ್ನು ಮಾಸ್ ಮೂಲಕ ಮಾರಾಟ ಮಾಡಿ ಸಂಸ್ಥೆಯನ್ನು ಬೆಳೆಸಿ
ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ನ. 25ರಂದು ನಿಂತಿಕಲ್ಲಿನಲ್ಲಿ ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಸಹಯೋಗದೊಂದಿಗೆ ಶುಭಾರಂಭಗೊಂಡ ಮಾಸ್ ನ ಅಡಿಕೆ ಖರೀದಿ ಕೆಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ಈಗಾಗಲೇ ಸುಳ್ಯದಲ್ಲಿ ಮಾಸ್ ಶಾಖೆ ಹೊಂದಿದ್ದು, ಮುಂದೆ 300 ಟನ್ ಗಳ ಗೋಡೌನ್, ಅಡಿಕೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಅಡಿಕೆಯನ್ನು ಸಂಸ್ಕರಿಸಿ ನೇರವಾಗಿ ಗುಜರಾತ್, ಮಹಾರಾಷ್ಟ್ರ ಮಾರುಕಟ್ಟೆಗೆ ಮಾರಾಟ ಮಾಡುವ ಯೋಜನೆಯನ್ನು ಹೊಂದಿದ್ದೇವೆ. 23 ವರ್ಷಗಳಿಂದ ನಡೆಯುತ್ತಿರುವ ಈ ಸಂಸ್ಥೆ ಪ್ರಸ್ತುತ 2.14ಕೋಟಿ ಪಾಲುಬಂಡವಾಳವನ್ನು ಹೊಂದಿದೆ. ರೈತರ ಗುಣಮಟ್ಟದ ಅಡಿಕೆಗೆ ಕ್ಯಾಂಪ್ಕೋ, ಎಪಿಎಂಸಿ ಮತ್ತಿತರ ಹೊರಗಿನ ಮಾರುಕಟ್ಟೆಯಲ್ಲಿ ನೀಡುವ ಮೌಲ್ಯಕ್ಕಿಂತ 2 ರೂಪಾಯಿ ಹೆಚ್ಚು ನೀಡಿ ಖರೀದಿಸುತ್ತೇವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿದ್ದರು. ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷೆ ಕುಸುಮಾವತಿ ರೈ ಕೆ.ಜಿ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಿ, ಮಂಗಳೂರು ಜನತಾ ಬಜಾರ್ ಮಾಜಿ ಅಧ್ಯಕ್ಷ ಪ್ರಸನ್ನ ಕೆ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಗತಿಪರ ಕೃಷಿಕ ಡಾ. ಪಿ. ರಾಮಚಂದ್ರ ಭಟ್ ದೇವಸ್ಯ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ದಿವ್ಯಾಯೋಗಾನಂದ, ಮಾಸ್ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ಶ್ರೀಮತಿ ರಾಜೀವಿ ಆರ್ ರೈ ಮತ್ತು ರಾಜಾರಾಂ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಸ್ ನ ಸಿಇಒ ಟಿ. ಮಹಾಬಲೇಶ್ವರ ಭಟ್ ವಂದಿಸಿದರು. ಸವಣೂರು ಪ್ರಾ.ಕೃ.ಪ.ಸ.ಸಂಘದ ಸಿಇಒ ಚಂದ್ರಶೇಖರ ಪಿ ಮತ್ತು ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಸಿಇಒ ಚಿದಾನಂದ ರೈ ಕಾರ್ಯಕ್ರಮ ನಿರೂಪಿಸಿದರು. ಎಣ್ಮೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತೃಪ್ತಿ, ತೃಷಾ, ಲಾವಣ್ಯ ಮತ್ತು ಚೈತನ್ಯ ಪ್ರಾರ್ಥಿಸಿದರು.
ಮಾಸ್ ಸಂಸ್ಥೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ, ಡಾ. ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಸಹಕಾರಿಗಳ ಒತ್ತಾಯದ ಮೇರೆಗೆ ಸೀತಾರಾಮ ರೈಯವರ ಅಧ್ಯಕ್ಷರಾದರು. ಅಧ್ಯಕ್ಷರಾದ ಕೆಲವೇ ಸಮಯದಲ್ಲಿ ಸಂಸ್ಥೆಯನ್ನು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪಡಿಸಿದ್ದಾರೆ. ಇವರು 25 ವರ್ಷಗಳ ಹಿಂದೆಯೇ ಅಧ್ಯಕ್ಷರಾಗುತ್ತಿದ್ದರೆ ಮಾಸ್ ಕ್ಯಾಂಪ್ಕೋ ಸಂಸ್ಥೆಯ ಸಮಾನತೆಯಲ್ಲಿ ಬೆಳೆಯುತ್ತಿದ್ದು, ಇನ್ನು 10 ವರ್ಷಗಳಲ್ಲಿ ಮಾಸ್ ಕ್ಯಾಂಪ್ಕೋ ಸಂಸ್ಥೆಗೆ ಸರಿ ಸಮಾನಾಗಿ ಬೆಳೆಯಲಿದೆ. ನಮ್ಮೂರಿನವರೇ ಆದ ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ಮಾಸ್ ನಲ್ಲಿ ಅಡಿಕೆಯನ್ನು ಮಾರಾಟ ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಿ – ಶಶಿಕುಮಾರ್ ರೈ ಬಾಲ್ಯೊಟ್ಟು
ನಿಂತಿಕಲ್ಲು ಅಡಿಕೆಯ ಪೊಟೆನ್ಸಿಯಲ್ ಏರಿಯಾ. ಮಾಸ್ ಉಳಿಯಬೇಕಾದರೆ ಅಡಿಕೆ ಬೆಳೆಗಾರರು ತಾವು ಬೆಳೆಸ ಅಡಿಕೆಯನ್ನು ಮಾಸ್ ಮೂಲಕ ಮಾರಾಟ ಮಾಡಬೇಕು. ಆದಷ್ಟು ರೈತರು ಮಾಸ್ ನ ಸದಸ್ಯರಾಗಿ – ಪ್ರಸನ್ನ ಕೆ