ಸಹಕಾರಿ ತತ್ವದ ಬಗ್ಗೆ ಅರಿವಿಲ್ಲದೆ ಬಾಯಿಗೆ ಬಂದಂತೆ ಆರೋಪಿಸಬೇಡಿ

0

ನೀವು ಚುನಾವಣೆಗೆ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇವೆ. ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಬೇಡಿ

ಸುಳ್ಳು ಅಪಪ್ರಚಾರ ಮಾಡಿದರೆ ಸಹಕಾರಿಗಳು ನಂಬುತ್ತಾರೆಂಬ ಭ್ರಮೆ ಬೇಡ

ಎಲ್ಲ 12 ಸ್ಥಾನಗಳನ್ನೂ ಗೆಲ್ಲುವ ವಿಶ್ವಾಸ ನಮಗಿದೆ

ತಮ್ಮ ವಿರುದ್ಧ ಆರೋಪಿಸಿ ಪತ್ರಿಕಾಗೋಷ್ಠಿ ಮಾಡಿದವರಿಗೆ ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಎದಿರೇಟು

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಏಕವ್ಯಕ್ತಿಯ ಆಡಳಿತ ನಡೆಯುತ್ತಿದೆ. ಅಲ್ಲಿ ಎಲ್ಲ ವರ್ಗದ ಜನರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಮೋಸ ಮಾಡಲಾಗುತ್ತಿದೆ ಎಂದು ಮುಂತಾಗಿ ಆರೋಪ ಮಾಡಿ ಪತ್ರಿಕಾಗೋಷ್ಠಿ ನಡೆಸಿದ್ದ ಸಮನ್ವಯ ಸಹಕಾರಿ ಬಳಗದ ಮುಖಂಡರಿಗೆ ಮರು ಪತ್ರಿಕಾಗೋಷ್ಠಿ ನಡೆಸಿ ಪ್ರತ್ಯುತ್ತರ ನೀಡಿರುವ ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮತ್ತು ನಿರ್ದೇಶಕರ ತಂಡ , ” ಸಮನ್ವಯ ಸಹಕಾರಿ ಬಳಗದ ಹೆಸರಲ್ಲಿ ಪತ್ರಿಕಾಗೋಷ್ಠಿ ನಡೆಸಿದವರು ಸಹಕಾರಿ ಸಂಘದ ಏಳಿಗೆ ಬಯಸುತ್ತಿಲ್ಲ. ಜನರಲ್ಲಿ ಸಂಸ್ಥೆಯ ಬಗ್ಗೆ ಹಾಳು ಭಾವನೆ ಮೂಡಿಸಿ ಸಂಸ್ಥೆಗೆ ನಷ್ಟವುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ” ಎಂದು ಆರೋಪಿಸಿದ್ದಾರೆ.


ಸಹಕಾರಿ ಕಾನೂನಿನ ಬಗ್ಗೆ , ಸಹಕಾರಿ ಸಂಸ್ಥೆಯ ಬಗ್ಗೆ ಅರಿವೇ ಇಲ್ಲದೆ ಬಾಯಿಗೆ ಬಂದಂತೆ ಆರೋಪಿಸಿರುವ ಅವರು ಚುನಾವಣೆಗೆ ಸ್ಪರ್ಧಿಸಲಿ. ಅದು ಬಿಟ್ಟು ಏಕವ್ಯಕ್ತಿ ಆಡಳಿತ ಎಂದೆಲ್ಲ ಹೇಳುವುದು ಸರಿಯಲ್ಲ. ನನ್ನ ನೇತೃತ್ವದ ಆಡಳಿತ ಮಂಡಳಿ ಕಳೆದ ಹದಿನೇಳುವರೆ ವರ್ಷಗಳಿಂದ ಸಂಪಾಜೆ ಸೊಸೈಟಿಯ ಆಡಳಿತ ನಡೆಸುತ್ತಿದ್ದು, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸಾಧಿಸಿದ್ದೇವೆ. ಸಹಕಾರಿ ಸಂಘಕ್ಕೆ ಅತ್ಯುತ್ತಮ ಕಟ್ಟಡ ನಿರ್ಮಿಸಿದ್ದೇವೆ. ಶತಮಾನೋತ್ಸವವನ್ನು ಇಡೀ ಗ್ರಾಮಸ್ಥರನ್ನು ಸೇರಿಸಿಕೊಂಡು ಸಂಘಟಿಸಿದ್ದೇವೆ. ಕೊರೋನಾ ಕಾಲದಲ್ಲಿ ನಮ್ಮ ಗ್ರಾಮದ ಬಡವರಿಗೆ ಉಚಿತ ಅಕ್ಕಿ ವಿತರಣೆ ಮಾಡಿದ್ದೇವೆ. ಮರಣ ಸಾಂತ್ವನ ನಿಧಿ ಮತ್ತಿತರ ಯೋಜನೆಗಳ ಮೂಲಕ ಜನರಿಗೆ ಕಷ್ಟಕಾಲದಲ್ಲಿ ನೆರವಿಗೆ ಧಾವಿಸುತ್ತೇವೆ. 2005 ಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷದವರು ಅಲ್ಲಿ ಅಧ್ಯಕ್ಷರಾಗಿರಲೇ ಇಲ್ಲ. ನನ್ನ ನೇತೃತ್ವದ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ವರೆಗೆ ಸೊಸೈಟಿ ಹೇಗಿತ್ತು – ನಂತರದ ಸೊಸೈಟಿ ಹೇಗಿದೆ ಎಂದು ಊರವರೊಡನೆ, ಸಂಘದ ಸದಸ್ಯರೊಡನೆ ಕೇಳಿ ತಿಳಿದುಕೊಳ್ಳಿ. ನಾವು ಕಾಂಗ್ರೆಸ್ ಬೆಂಬಲಿತರಾದರೂ ಸಹಕಾರಿ ಸಂಸ್ಥೆಯಲ್ಲಿ ಪಕ್ಷ ರಾಜಕೀಯ ಮಾಡುವುದಿಲ್ಲ. ಎಲ್ಲರಿಗೂ ಸಾಲ ಸೌಲಭ್ಯ ನೀಡಿದ್ದೇವೆ. ಸಾಲ ಸರಿಯಾಗಿ ಮರುಪಾವತಿ ಮಾಡದೆ ಡಿಫಾಲ್ಟರ್ ಆದವರಿಗೆ ಮಾತ್ರ ಸಹಕಾರಿ ಕಾಯಿದೆಯ ಪ್ರಕಾರ ಮತದಾನದ ಹಕ್ಕು ಇರುವುದಿಲ್ಲ ” ಎಂದು ಸೋಮಶೇಖರ ಕೊಯಿಂಗಾಜೆ ಹೇಳಿದರು.
ಐದು ವರ್ಷದ ಅವಧಿಯಲ್ಲಿ ಎರಡು ಮಹಾಸಭೆಗೂ ಬಾರದವರಿಗೆ ಮತ್ತು ವರ್ಷಕ್ಕೆ ಕನಿಷ್ಟ 500 ರೂ. ಬಡ್ಡಿ ಕಟ್ಟದವರಿಗೆ ಅಥವಾ ಬಡ್ಡಿ ಪಡೆಯದವರಿಗೆ ಮತದಾನದ ಅವಕಾಶ ಕಾಯಿದೆ ಪ್ರಕಾರ ಇರುವುದಿಲ್ಲ. ಇದು ಸಂಪಾಜೆಗಾಗಿ ಮಾಡಿದ ಕಾಯಿದೆ ಅಲ್ಲ. ಇಡೀ ರಾಜ್ಯದಲ್ಲಿ ಇರುವಂತಾದ್ದು. ಈ ಕಾಯಿದೆ ಮಾಡಿದವರೂ ಅಸ ಪತ್ರಿಕಾಗೋಷ್ಠಿ ಮಾಡಿದ ನಾಯಕರು ಬೆಂಬಲಿಸುವ ಪಕ್ಷದ ಸರಕಾರದವರು. ಸಹಕಾರಿಯ ಎಲ್ಲ ಸದಸ್ಯರಿಗೆ ಮತದಾನದ ಅವಕಾಶ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಕಾಯಿದೆಗೆ ತಿದ್ದುಪಡಿ ಮಾಡಿ ಎರಡೂ ಸದನದಲ್ಲಿ ಪಾಸ್ ಮಾಡಿ ರಾಜ್ಯಪಾಲರಲ್ಲಿಗೆ ಕಳುಹಿಸಿದಾಗ ರಾಜ್ಯಪಾಲರು ಅದನ್ನು ವಾಪಸ್ ಮಾಡಿದ್ದಾರೆ.
ಅದನ್ನು ಇವರು ತಿಳಿದುಕೊಂಡಿರಬೇಕಿತ್ತು. ವಿಪಕ್ಷದ ಇಬ್ಬರು ನಿರ್ದೇಶಕರು ಆಡಳಿತ ಮಂಡಳಿಯಲ್ಲಿದ್ದಾರೆ. ಅವರಲ್ಲಿ ಕೇಳಿದ್ದರೆ ಅವರಾದರೂ ಹೇಳುತ್ತಿದ್ದರು” ಎಂದು ಹೇಳಿದ ಸೋಮಶೇಖರ್ ರವರು ” ಇವರು ಚುನಾವಣೆಗೆ ಸ್ಪರ್ಧಿಸಲಿ. ನಾವು ಸ್ವಾಗತಿಸುತ್ತೇವೆ‌. ಆದರೆ ಇಲ್ಲಸಲ್ಲದ ಅಪವಾದದ ಮಾತುಗಳನ್ನಾಡುವುದನ್ನು ಖಂಡಿಸುತ್ತೇವೆ ” ಎಂದರು.

ಸೋಮಶೇಖರ್ ನಮ್ಮ ಮತ್ತು ಜನರ ವಿಶ್ವಾಸಾರ್ಹ ನಾಯಕ
ಸಂಪಾಜೆ ಸೊಸೈಟಿಯ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕರವರು, ” ಸಹಕಾರಿ ಸಂಘಗಳು ಜನರ ವಿಶ್ವಾಸದ ಆಧಾರದಲ್ಲಿ ಇರುವಂಥವು. ಸೋಮಶೇಖರ ಕೊಯಿಂಗಾಜೆಯವರ ನಾಯಕತ್ವದಲ್ಲಿ ಸರ್ವ ಜಾತಿ ಧರ್ಮದವರಿಗೆ, ಸರ್ವ ಪಕ್ಷದವರಿಗೆ ವಿಶ್ವಾಸವಿದೆ. ಆದ್ದರಿಂದ ಸಂಪಾಜೆ ಸೊಸೈಟಿ ಇಷ್ಟೊಂದು ಆಭಿವೃದ್ಧಿಯಾಗಿದೆ. ಮುಂದೆಯೂ ಸೋಮಶೇಖರ್ ರವರೇ ನಮ್ಮ ನಾಯಕರಾಗಿರುತ್ತಾರೆ. ಅವರೇ ಅಧ್ಯಕ್ಷರಾಗುತ್ತಾರೆ ” ಎಂದರು.

ಸೋಮಶೇಖರ್ ಅಧ್ಯಕ್ಷರಾ್ ಬಳಿಕ ಅಭಿವೃದ್ಧಿ
” ಹಿಂದೆ ಸೊಸೈಟಿಯಲ್ಲಿ ಅಧ್ಯಕ್ಷರಿಗೆ, ಕಾರ್ಯದರ್ಶಿ ಯವರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಚೇಂಬರ್ ಇರಲಿಲ್ಲ. ಕಟ್ಟಡವೂ ಹಳೆಯದಿತ್ತು. ಸೋಮಶೇಖರರು ಅಧ್ಯಕ್ಷರಾದ ಬಳಿಕ ಸುಸಜ್ಜಿತ ಕಟ್ಟಡ, ಗ್ರಾಹಕರಿಗೆ, ಸದಸ್ಯರಿಗೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿದೆ ” ಎಂದು ನಿರ್ದೇಶಕ ಎಚ್.ಹಮೀದ್ ಹೇಳಿದರು.

ಅಪಪ್ರಚಾರ ಸಂಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
” ಸಹಕಾರಿ ಸಂಘದ ಬಗ್ಗೆ ಅಪಪ್ರಚಾರ ಮಾಡುವುದು ತರವಲ್ಲ. ಸಂಘದಲ್ಲಿ ಅಧ್ಯಕ್ಷರ ಮೇಲೆ, ನಿರ್ದೇಶಕರ ಮೇಲೆ, ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ಮೇಲೆ ವಿಶ್ವಾಸದಿಂದ ಜನರು ಡಿಪಾಸಿಟ್ ಇಡುತ್ತಾರೆ. ಈ ರೀತಿ ಅಪಪ್ರಚಾರ ಮಾಡಿ ಜನರಲ್ಲಿ ಗೊಂದಲ ಮೂಡಿಸಿದರೆ ಸಂಸ್ಥೆಯ ಮೆರಲೆ ಕೆಟ್ಟ ಪರಿಣಾಮವಾಗುತ್ತದೆ. ಆದ್ದರಿಂದ ಟೀಕೆಗಳು ಬೇಕು. ಅವು ಸತ್ಯದ ನೆಲೆಗಟ್ಟಿನಲ್ಲಿ ನಿಂತಿರಬೇಕೇ ಹೊರತು ಪಕ್ಷರಾಜಕೀಯದ ನೆಲೆಯಲ್ಲಿ ಅಪಪ್ರಚಾರದ ನೆಲೆಯಲ್ಲಿ ಇರಬಾರದು ” ಎಂದು ನಿರ್ದೇಶಕ ಕೆ.ಪಿ.ಜಾನಿ ಹೇಳಿದರು.

ನನ್ನ ಬೆಂಬಲ ಸೋಮಶೆರಖರರಿಗೆ
ನಿರ್ದೇಶಕ ಕೆ.ಆರ್.ಜಗದೀಶ್ ರೈಯವರು ಮಾತನಾಡಿ ” ಸೋಮಶೇಖರ ರೈಯವರು ಸೊಸೈಟಿ ಅಧ್ಯಕ್ಷರಾದ ಬಳಿಕ ಸೊಸೈಟಿ ತುಂಬ ಅಭಿವೃದ್ಧಿ ಯಾಗಿದೆ. ನನ್ನ ಬೆಂಬಲ ಯಾವತ್ತೂ ಸೋಮಶೇಖರರಿಗೆ ” ಎಂದರು.

ನನ್ನ ಮಗ ಪತ್ರಿಕಾಗೋಷ್ಠಿ ಗೆ ಹೋಗಿರಲಿಲ್ಲ. ಆದರೂ ಅವನ ಹೆಸರನ್ನು ಕೊಟ್ಟಿದ್ದಾರೆ
” ಮೊನ್ನೆ ಅವರ ಪತ್ರಿಕಾಗೋಷ್ಠಿಯಲ್ಲಿ ನನ್ನ ಮಗ ಗುರುಪ್ರಸಾದ್ ದಾಸ್ ಭಾಗವಹಿಸಿದ್ದಾಗಿ ಪತ್ರಿಕೆಯಲ್ಲಿ ಅವರು ತಿಳಿಸಿದ್ದಾರೆ. ಆದರೆ ಅವನು ಅವರ ಪತ್ರಿಕಾಗೋಷ್ಠಿಗೆ ಹೋಗಿರಲಿಲ್ಲ. ಅವನು ಎಡಮಂಗಲದಲ್ಲಿದ್ದ. ಪತ್ರಿಕಾಗೋಷ್ಠಿ ನಡೆಸಿದವರಲ್ಲಿ ಕೆಲವರು ಅವನ ಗೆಳೆಯರು. ಆದ್ದರಿಂದ ಅವನ ಕಾರು ಕೇಳಿದ್ದರಿಂದ ಕೊಟ್ಟಿದ್ದ. ಅವನ ಹೆಸರನ್ನು ಅವರು ಕೊಟ್ಟದ್ದು ಸರಿಯಲ್ಲ ” ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಿರ್ದೇಶಕಿ ಶ್ರೀಮತಿ ರಾಜೀವಿ ಎಸ್. ಹೇಳಿದರು.

ಮನೆ ಒಡೆಯುವ ಯತ್ನ
ಈ ಸಂದರ್ಭ ಮಾತನಾಡಿದ ಸೋಮಶೇಖರರು, ” ಆ ಪತ್ರಿಕಾಗೋಷ್ಠಿ ನಡೆಸಿದ ಕೆಲವರು ಮನೆ ಒಡೆಯುವ ಪ್ರಯತ್ನ ನಡೆಸಿದ್ದಾರೆ. ಕೃಷ್ಣಪ್ಪ ದಾಸ್ ರವರ ಮನೆಯವರು ಮತ್ತು ನಮ್ಮ ಮನೆಯವರು ಯಾವ ರೀತಿಯ ಸಂಬಂಧದಲ್ಲಿದ್ದೇವೆ ಎಂದರೆ ಅಷ್ಟು ನಿಕಟವಾಗಿದ್ದೇವೆ. ಕೃಷ್ಣಪ್ಪರು ನಾನು ಬಾಲಕನಾಗಿರುವಾಗ ನನ್ನನ್ನು ಎತ್ತಿ ಆಡಿಸಿದವರು. ಆ ಸಂಬಂಧ ಈಗಲೂ ನಮ್ಮಲ್ಲಿದೆ. ಅದಕ್ಕೆ ಹುಳಿ ಹಿಂಡಲು ಇವರು ನೋಡಿದ್ದಾರೆಂದು ನೇರವಾಗಿ ನಾನು ಹೇಳುತ್ತೇನೆ. ಇಲ್ಲದಿದ್ದರೆ ಪತ್ರಿಕಾಗೋಷ್ಠಿ ಗೆ ಹೋಗದಿರುವವನ ಹೆಸರು ಮಾಧ್ಯಮದವರಿಗೆ ಇವರು ಯಾಕೆ ಹೇಳಬೇಕಿತ್ತು ? ” ಎಂದು ಹೇಳಿದರು.
ಹಿರಿಯ ನಿರ್ದೇಶಕರುಗಳಾದ ಶ್ರೀಮತಿ ಯಮುನಾ ಬಿ.ಎಸ್. ಮತ್ತು ಶ್ರೀಮತಿ ಉಷಾ ರಾಮ ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.