ಮತದಾನ ಆರಂಭ – ತಮ್ಮದೇ ಗೆಲುವು ಎನ್ನುತ್ತಿರುವ ಕೊಯಿಂಗಾಜೆ ಬಳಗ
ಗೆಲುವು ನಮ್ಮದೇ : ಕೆ.ಪಿ.ಬಳಗ
ಜಂಟಿಯಾಗಿ ಮತಯಾಚನೆ ಮಾಡುತ್ತಿರುವ ಜಿ.ಕೆ. ಹಮೀದ್ ಹಾಗೂ ಸುಮತಿ
ತಮ್ಮ ಚಿಹ್ನೆಯಾದ ಟಾರ್ಚ್ ಲೈಟ್ ಹಿಡಿದು ಮತಯಾಚಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಕೇಶವ ಬಂಗ್ಲೆಗುಡ್ಡೆ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಸಹಕಾರಿ ಸಂಘ ಆವರಣದಲ್ಲಿ ಚುನಾವಣೆ ಆರಂಭಗೊಂಡಿದ್ದು, ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ.
ಸಂಪಾಜೆ ಸಹಕಾರಿ ಸಂಘದ 12 ನಿರ್ದೇಶಕ ಸ್ಥಾನಗಳಿಗೆ ಸೋಮಶೇಖರ ಕೊಯಿಂಗಾಜೆ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರಿಗಳ ಅಭಿವೃದ್ಧಿ ರಂಗದ 12 ಮಂದಿ ಅಭ್ಯರ್ಥಿಗಳು, ಬಿಜೆಪಿ ಬೆಂಬಲಿತ ಸಮಾನ ಮನಸ್ಕರ ಸಮನ್ವಯ ಸಹಕಾರಿ ಬಳಗದ 12 ಮಂದಿ ಅಭ್ಯರ್ಥಿಗಳು, ಕಾಂಗ್ರೆಸ್ ಬಂಡಾಯ ಸ್ವತಂತ್ರ 2 ಮಂದಿ ಹಾಗೂ ಬಿಜೆಪಿ ಬಂಡಾಯ ಸ್ವತಂತ್ರ ಒಬ್ಬರು ಸೇರಿದಂತೆ ಒಟ್ಟು 27 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಸೋಮಶೇಖರ ಕೊಯಿಂಗಾಜೆ ನೇತೃತ್ವದ ತಂಡದವರು ಸದಸ್ಯ ಮತದಾರರಿಂದ ಮತಯಾಚಿಸುತ್ತಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆ.ಪಿ. ಜಗದೀಶ್ ನೇತೃತ್ವದಲ್ಲಿ ಸಮಾನ ಮನಸ್ಕರ ಸಮನ್ವಯ ಸಹಕಾರಿ ಬಳಗದ ತಂಡದವರು ಕೂಡ ಮತಯಾಚನೆ ನಡೆಸುತ್ತಿದ್ದು, ಗೆಲುವು ನಮ್ಮದೇ ಎಂದು ಹೇಳುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿಗಳಾದ ಜಿ.ಕೆ. ಹಮೀದ್ ಮತ್ತು ಶ್ರೀಮತಿ ಸುಮತಿ ಶಕ್ತಿವೇಲು ಅವರು ಜೊತೆಯಾಗಿ ನಿಂತು ಮತಯಾಚನೆ ನಡೆಸುತ್ತಿದ್ದಾರೆ.
ಬಿಜೆಪಿ ಬಂಡಾಯ ಸ್ವತಂತ್ರ ಅಭ್ಯರ್ಥಿಯಾದ ಕೇಶವ ಬಂಗ್ಲೆಗುಡ್ಡೆ ಅವರು ತಮ್ಮ ಚಿಹ್ನೆಯಾದ ಟಾರ್ಚ್ ಲೈಟ್ ಹಿಡಿದು ಸದಸ್ಯ ಮತದಾರರಿಂದ ಮತಯಾಚನೆ ಮಾಡುತ್ತಿದ್ದಾರೆ.
ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ, ಭದ್ರತೆ ಒದಗಿಸಿದ್ದು, ಸಂಜೆಯವರೆಗೆ ಮತದಾನ ನಡೆಯಲಿದೆ. ಆ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ.