ಶಾಲಾ ಮೇಲ್ಚಾವಣಿ ದುರಸ್ಥಿಯಿಂದ “ಗಟ್ಟಿಯಾದ” ಗಟ್ಟಿಗಾರು ಕಿರಿಯ ಪ್ರಾಥಮಿಕ ಶಾಲೆ

0

ನೆಲ್ಲೂರು ಕೆಮ್ರಾಜೆ ಪಂಚಾಯತ್ ಅಧ್ಯಕ್ಷರ ನಿರಂತರ ಶ್ರಮದಿಂದ ಶಾಲಾ ರಂಗಮಂದಿರದಲ್ಲಿ ಬಿಸಿಲಿನ ಬೇಗೆಯಲ್ಲಿದ್ದ ವಿದ್ಯಾರ್ಥಿಗಳು ನಿರಾಳ

ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಪರಿಸರವಿದ್ದರೂ, ಶಾಲೆಗೊಂದು ಕಟ್ಟಡವಿದ್ದರೂ ಕಟ್ಟಡ ಮೇಲ್ಚಾವಣಿ ಕುಸಿತದ ಭಯದಿಂದ ರಂಗಮಂದಿರದಲ್ಲಿ ಬಿಸಿಲಿನ ಬೇಗೆಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಮುಕ್ತಿ ಸಿಕ್ಕಿದೆ. ಮಕ್ಕಳು ಈಗ ನಿರಾಳರಾಗಿದ್ದಾರೆ. ಯಾಕೆಂದರೆ ಗಟ್ಟಿಗಾರು ಕಿರಿಯ ಪ್ರಾಥಮಿಕ ಶಾಲೆ ಈಗ ಮೇಲ್ಚಾವಣಿ ದುರಸ್ಥಿಗೊಂಡು ಗಟ್ಟಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಗಟ್ಟಿಗಾರು ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿಯುವ ಹಂತ ತಲುಪಿತ್ತು. ಹೀಗಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು, ಶಿಕ್ಷಕರು ದುರಸ್ಥಿ ಮಾಡುವ ಬಗ್ಗೆ ಮನವಿ ನೀಡುತ್ತಲೇ ಬಂದಿದ್ದರು. ಆದರೆ ಇವರ ಮನವಿಯನ್ನು ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಪರಿಣಾಮ ಮೇಲ್ಚಾವಣಿಯಿಂದ ನೀರು ಶಾಲಾ ಕೊಠಡಿಯೊಳಗೆ ಸೋರಿಕೆಯಾದುದು ಮಾತ್ರವಲ್ಲದೇ ಮೇಲ್ಚಾವಣಿ ಕುಸಿಯುವ ಹಂತಕ್ಕೆ ತಲುಪಿತ್ತು. ಹೀಗಾಗಿ ಕೊಠಡಿಯೊಳಗೆ ವಿದ್ಯಾರ್ಥಿಗಳು ಕುಳಿತುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಗ್ರಾಮ ಪಂಚಾಯತ್ ಮತ್ತು ಎಸ್.ಡಿ.ಎಂ.ಸಿ. ಯವರು, ಪೋಷಕರು ಸೇರಿ ಶಾಲಾ ಪಕ್ಕದಲ್ಲಿದ್ದ ರಂಗಮಂದಿರದಲ್ಲಿ ಟರ್ಪಾಲ್ ಗಳನ್ನು ನೆಲಕ್ಕೆ ಹಾಸಿ, ರಂಗಮಂದಿರದ ಬದಿಗೆ ಟರ್ಪಾಲ್ ಕಟ್ಟಿ ತಾತ್ಕಾಲಿಕ ಶೆಡ್ ನ ರೀತಿ ಮಾಡಿ ಕಳೆದ ಮಳೆಗಾಲದದಿಂದ ಮಕ್ಕಳಿಗೆ ಪಾಠ ಮಾಡತೊಡಗಿದರು. ಆದರೆ ಮಳೆಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಯಲ್ಲಿ ಮಕ್ಕಳಿಗೆ ರಂಗಮಂದಿರದಲ್ಲಿ ಕುಳಿತುಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಕಟಗೊಂಡಿತ್ತು.

ಛಲ ಬಿಡದೆ ಅನುದಾನ ತರಿಸಿದ ಪಂಚಾಯತ್ ಅಧ್ಯಕ್ಷರು : ಶಾಲಾ ಮೇಲ್ಚಾವಣಿ ದುರಸ್ಥಿ ಮಾಡಲು ಸುಮಾರು 7ರಿಂದ 8 ಲಕ್ಷದಷ್ಟು ವೆಚ್ಚ ಬೇಕಾಗಿತ್ತು. ಹೀಗಾಗಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆಯವರು ಇಲಾಖೆ, ಅಧಿಕಾರಿಗಳಲ್ಲಿ ನಿರಂತರ ಬೇಡಿಕೆ ಇಡತೊಡಗಿದರು. ಹೀಗಾಗಿ ಜಿಲ್ಲಾ ಪಂಚಾಯತ್‌ನಿಂದ ಮಳೆ ಹಾನಿ ಯೋಜನೆಯಡಿ 3 ಲಕ್ಷ ಮತ್ತು ಜಿಲ್ಲಾಧಿಕಾರಿಗಳಿಂದ ರೂ.2 ಲಕ್ಷ ಅನುದಾನ ಮಂಜೂರುಗೊಂಡು ಇದೀಗ ಕಟ್ಟಡ ದುರಸ್ಥಿಗೊಂಡಿದೆ. ಒಟ್ಟು 5 ಲಕ್ಷ ವೆಚ್ಚದಲ್ಲಿ ಕಟ್ಟಡ ಮೇಲ್ಚಾವಣಿ ದುರಸ್ಥಿ ಪೂರ್ತಿಗೊಂಡಿದೆ. ಇದರೊಂದಿಗೆ ಊರವರು ಮತ್ತು ಪೋಷಕರು ಶ್ರಮದಾನದಲ್ಲಿಯೂ ಪಾಲ್ಗೊೊಂಡಿದ್ದರು. ಒಟ್ಟಾಗಿ ಬಿಸಿಲಿನ ಬೇಗೆಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಇದೀಗ ನಿರಾಳರಾಗಿದ್ದಾರೆ.