ಸುಳ್ಯದ ಪುರದೊಡೆಯ ಚೆನ್ನಕೇಶವನಿಗೆ ರಥಂ ಸಮರ್ಪಿತಂ…

0

ರಮೇಶ್ ಇರಂತಮಜಲು

ಸುಳ್ಯದ ಜನತೆಯ ಭಾಗ್ಯವಾದ ಈ ಬಾರಿಯ ಜಾತ್ರೆ ಎಲ್ಲೆಲ್ಲೂ ಪ್ರಶಂಸೆಯ ಮಾತುಗಳೇ ಕೇಳಿ ಬಂದಿದೆ.
ಜಾತ್ರೆಯ ಅಡ್ಕ (ರಥಬೀದಿ ) ಪೂರ್ತಿಯಾಗಿ ಜನ ಸಾಗರದ ಅಲೆಯಂತೆ, ಎಲ್ಲಾ ಸಂತೆಯವರಿಗೂ ಲಾಭದ ರಸದೌತಣ. ವರುಷಗಳ ಬರ ನೀಗಿದ ಕ್ಷಣ. ರಥೋತ್ಸವದಂದು ಬ್ರಹ್ಮರಥ ನೋಡಲೆಂದೇ ಬಂದ ಭಕ್ತ ಸಮೂಹ. ಎಲ್ಲೂ ಕಾಲಿಟ್ಟು ನಿಲ್ಲಲೂ ಆಗದಷ್ಟು… ಕಾರಣವಿಷ್ಟೇ…
ಜಗದೊಡೆಯ ಸುಳ್ಯದ ಪುರವಾಸ ಶ್ರೀ ಚೆನ್ನಕೇಶವನ ಬ್ರಹ್ಮರಥೋತ್ಸವ.

ಅದಕ್ಕಾಗಿಯೇ ಜನ ಹಾತೊರೆದದ್ದು. ಅದನ್ನು ಕಾಣುವ ಸೌಭಾಗ್ಯಕ್ಕಾಗಿ ಕಾದು ಕುಳಿತದ್ದು.
ವೈಕುಂಠ ಏಕಾದಶಿಯಂದೇ ಬ್ರಹ್ಮ ರಥೋತ್ಸವ. ರಥೋತ್ಸವ ನೋಡಿದವರಿಗೇ ಅನನ್ಯ ಫಲಸಿದ್ದಿ ಲಭಿಸುವುದು. ಇನ್ನು ರಥ ಎಳೆದವರಿಗೋ ಅದಕ್ಕಿಂತಲೂ ಕೀರ್ತಿ. ಇನ್ನು ಜಾತ್ರೋತ್ಸವದಲ್ಲಿ ಪಾಲ್ಗೊಂಡವರಿಗೆ ಸಂತೋಷ ಪ್ರಾಪ್ತಿ. ಹೀಗೆಂದಿದೆ ಶಾಸ್ತ್ರ. ಹಾಗಾದರೆ ಬ್ರಹ್ಮ ರಥವನ್ನು ಶ್ರೀ ದೇವರಿಗೆ ಸಮರ್ಪಿಸಿ ಕೃತಾರ್ಥರಾದವರ ಗೌರವವೇನು ಎಂಬುದು ತಿಳಿಯದಿರದು. ಬ್ರಹ್ಮರಥ ದೇಗುಲಕ್ಕೆ ಕಾಣಿಕೆಯಾಗಿ ಅರ್ಪಿಸಿರಬಹುದು. ಆದರೆ ಇದು ಅಷ್ಟಕ್ಕೇ ಸೀಮಿತವಲ್ಲ. ಅದು ಸನಾತನ ಹಿಂದು ಧರ್ಮಕ್ಕೇ ಮಾಡಿದ ಬಲು ದೊಡ್ಡ ಸೇವೆಯೇ ಹೌದು.
ಆ ಸೇವೆಯನ್ನು ಪರಿಪೂರ್ಣವಾಗಿ ಶ್ರೀ ದೇವರು ಸ್ವೀಕರಿಸಿದ್ದಾರೆ ಎಂಬುದಕ್ಕೆ ಚೆನ್ನಕೇಶವ ರೂಪದಲ್ಲಿ ಜೊತೆಯಾದ ಜನ ಸಾಗರವೇ ಸಾಕ್ಷಿ.
ಏನೆಂದು ಹೇಳಲಿ…!
ರಥೋತ್ಸವ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಕಾದು ಕುಳಿತಿರುವಾಗ, ಸಾವಿರಾರು ಜನರಿಗೆ ಈ ಪುಣ್ಯ ಕಾರ್ಯವನ್ನು ಉಣಬಡಿಸಬೇಕು ಎಂಬ ಹಂಬಲದಲ್ಲಿರುವ ವಿವಿಧ ಟಿವಿ ಚಾನೆಲ್ ಗಳ ಧಾವಂತವನ್ನು ಅದುಮಿಡಲಾದಿತೇ…
ಹಲವಾರು ಡ್ರೋನ್ ಗಳು ವಿಮಾನದಂತೆ ಹಾರುತ್ತಾ ನಕ್ಷತ್ರದ ಹಾಗೆ ಮಿನುಗುತ್ತಿದ್ದವು. ಅಲ್ಲೂ ಕೂಡ ಬ್ರಹ್ಮ ರಥೋತ್ಸವದ ಗೌಜಿಯಿತ್ತು. ಡಿಸೆಂಬರ್ 25 – 2024 ರಂದು ಬ್ರಹ್ಮರಥವು ಶ್ರೀಚೆನ್ನಕೇಶವ ಪುರ ಪ್ರವೇಶ ಕ್ಷಣ. ಅದ್ಬುತ.. ಅತ್ಯದ್ಭುತ.. ಸುಳ್ಯದಲ್ಲಿ ಇದುವರೆಗೂ ಕಾಣದಂಥ ವಿವಿಧ ಬಗೆಯ ಕಲಾ ಸಾಂಸ್ಕೃತಿಕ ಪ್ರಕಾರಗಳು,ಸುಳ್ಯದ ಪೈಚಾರಿನಿಂದಲೇ ಬೀದಿಯ ಎರಡೂ ಬದಿಯಲ್ಲಿ ನಿಂತು ಬ್ರಹ್ಮ ರಥವನ್ನು ಬರಮಾಡಿಕೊಂಡ ಜನ ಸಮೂಹದ ಭಕ್ತಿ. ಎಲ್ಲೆಲ್ಲೂ ಪೂಜೆ ಪುರಸ್ಕಾರ. ದೂರದಲ್ಲಿ ಕಂಡೊಡನೆ ಬರಿಗಾಲಲ್ಲಿ ನಿಂತು ಶಿರ ಬಾಗಿದವರೇಷ್ಟೋ …
ಶ್ರೀ ದೇವರೇ ರಥವೇರಿ ಬರುವಂತಾಯಿತು. ಅಂದೇ ಸುಳ್ಯ ಜಾತ್ರೆ ಪ್ರಾರಂಭ ಆದಂತಿತ್ತು. ವಾಹನ ದಟ್ಟನೆ ತಿಳಿಗೊಳಿಸಲಾಗುತ್ತಿತ್ತು. ಎಲ್ಲೆಲ್ಲೂ ಜಗಮಗಿಸುವ ದೀಪಾಲಂಕಾರ, ಸಿಡಿಮದ್ದಿನ ವೈಭವ ಎಲ್ಲವೂ ಅನನ್ಯ..

ಒಟ್ಟಿನಲ್ಲಿ ದೀಪಾವಳಿಗೆ ಅಯೋದ್ಯೆಯಲ್ಲಿ ಪುರುಷೋತ್ತಮ ಶ್ರೀರಾಮನನ್ನೇ ಸ್ವಾಗತಿಸುವಂತಿತ್ತು.
ಆ ಬಳಿಕ ರಥ ಭೂಸ್ಪರ್ಶ, ಸಮರ್ಪಣೆ ಎಲ್ಲವೂ ಒಂದಕ್ಕಿಂತ ಒಂದು ಮಿಗಿಲು ಎಂಬಂತೆ ಸುಸೂತ್ರವಾಯಿತು. ಅಲ್ಲೇ ಅರಿವಾಯಿತು, ಮಹಾರಥವು ಶ್ರೀ ದೇವರಿಗೆ ಪರಿಪೂರ್ಣವಾಗಿ ಸಮರ್ಪಿತವಾಯಿತೆಂದು. ಸುಳ್ಯ ಜಾತ್ರೆಯೇನೋ 02-01-2025 ರಂದು ಕೊಡಿಯೆರುವ ಮೂಲಕ ಪ್ರಾರಂಭಗೊಂಡು 12-01-2025 ರಂದು ದ್ವಜಾವರೋಹಣದೊಂದಿಗೆ ದೈವಿಕ ವಿಧಿ (ನಿಯಮ ) ಯಂತೆ ಸಮಾಪನಗೊಂಡಿದೆ. ಆದರೆ ಸಾರ್ವಜನಿಕವಾಗಿ ಈ ವರ್ಷ ಇನ್ನೂ ಜಾತ್ರೆ ಮುಂದುವರಿದಂತಿದೆ. ರಥಬೀದಿಯನ್ನು ಬಿಟ್ಟು ಜನ ಹೋಗಲಾರದ ಮನಸ್ಥಿತಿ.. ಬಂದವರೆಲ್ಲರೂ ರಥದ ಅದ್ಬುತ ವಿನ್ಯಾಸ, ಮತ್ತು ಶಿಲ್ಪಿಗಳ ಶಿಲ್ಪ ಶಾಸ್ತ್ರದ ಪಾಂಡಿತ್ಯ ನೋಡಿ, ಮಹಾರಥವನ್ನೊಮ್ಮೆ ಕಣ್ತುಂಬಿಕೊಳ್ಳೋ ಪರಿಯೋ…ಅಬ್ಬಾ.. ಮನ ತಣಿಯುವಷ್ಟು..
ಒಟ್ಟಿನಲ್ಲಿ ಈ ಬಾರಿಯ ಜಾತ್ರೆ ನ:ಭೂತೋ.., ನ:ಭವಿಷ್ಯತಿ. ಎಂಬಂತಾಯಿತು.

ಪವಿತ್ರ ಸನಾತನ ಧರ್ಮೀಯರಿಗೆ ಧಾರ್ಮಿಕ ರಾಸದೌತಣವನ್ನು ಉಣಬಂಡಿಸಿದ ಡಾ. ಕೆ ವಿ.ಚಿದಾನಂದರ ಕುಟುಂಬ ಹಾಗೂ ಜೊತೆಯಾದ ಮತ್ತೆಲ್ಲಾ ಆಸ್ತಿಕರಿಗೆ- ದಾನಿಗಳಿಗೆ, ಪ್ರಣಾಮಗಳೊಂದಿಗೆ ಮನದಲ್ಲೇ ಮಣಿಯುವೆ.

ರಮೇಶ್ಇರಂತಮಜಲು