ಫೆ.10ರಿಂದ ಗ್ರಾಮ ಆಡಳಿತಾಧಿಕಾರಿಗಳ ಸೇವೆ ಸ್ಥಗಿತ

0

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರರಕ್ಕೆ ನಿರ್ಧಾರ

ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಕೆ

ಕರ್ನಾಟಕ ರಾಜ್ಯ ಗ್ರಾಮದ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಫೆ.೧೦ರಿಂದ ೨ ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸಂಘ ಕರೆ ನೀಡಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನಲ್ಲಿಯೂ ಗ್ರಾಮ ಆಡಳಿತಾಧಿಕಾರಿಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ರಾಮ ಆಡಳಿತಾಧಿಕಾರಿಗಳ ಸುಳ್ಯ ತಾಲೂಕು ಅಧ್ಯಕ್ಷ ಶಿವರಾಜ್ ಗಾಯಕ್‌ವಾಡ್ ತಿಳಿಸಿದ್ದಾರೆ.


ಫೆ.೭ರಂದು ಗ್ರಾಮ ಆಡಳಿತಾಧಿಕಾರಿಗಳು ಸೇರಿಕೊಂಡು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದಾರೆ.


ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು ೫೧.೫ ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು.


ಚಿಕ್ಕಮಗಳೂರು ಜಿಲ್ಲೆಯಲ್ಲಿ ೩೦ ಗ್ರಾಮದ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಯಮಗಳನ್ನು ಉಲ್ಲಂಸಿ ಹೊರಡಿಸಿರುವ ದಂಡನಾ ಆದೇಶವನ್ನು ಹಿಂಪಡೆಯಬೇಕು.
ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್. ನಿಯಮ ೧೬ ಎ ರ ಉಪಖಂಡ (೨) ನ್ನು ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗ ಸೂಚಿಯನ್ನು ರಚಿಸಬೇಕು.


ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು.


ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ೫೦ ಲಕ್ಷ ರೂ.ಗಳ ಪರಿಹಾರ ಮಂಜೂರು ಮಾಡಬೇಕು. ಪೋಲೀಸ್ ಇಲಾಖೆಯಲ್ಲಿರುವಂತೆ ನೂರಾರು ಕೆಲಸಗಳನ್ನು, ನಿರ್ವಹಿಸುವ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿ ಮಾಡಿ ಆದೇಶಿಸಬೇಕು. ಪ್ರಯಾಣ ಭತ್ಯೆಗಳನ್ನು ಹೆಚ್ಚು ಮಾಡಬೇಕು. ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಟತೆಯನ್ನು ರಾಜ್ಯ ಮಟ್ಟದ ಜೇಷ್ಟತೆಯನ್ನಾಗಿ ಪರಿಗಣಿಸಬೇಕು.


ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಮಾತ್ರ ನೀಡುವ ಜವಾಬ್ದಾರಿ ನಿರ್ವಹಿಸುವಂತೆ ಆದೇಶಿಸಬೇಕು. ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ/ ತೋಟಗಾರಿಕೆ ಇಲಾಖೆಗಳು ನಿರ್ವಹಿಸುವಂತೆ ಆದೇಶಿಸಬೇಕು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಿಸಬೇಕು ಸಹಿತ ೨೩ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.
ಮೂರು ತಿಂಗಳ ಹಿಂದೆ ಇದೇ ಬೇಡಿಕೆಯನ್ನು ಇಟ್ಟುಕೊಂಡು ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರು. ಭೇಡಿಕೆ ಈಡೇರಿಕೆಯ ಕುರಿತು ಸರಕಾರ ಭರವಸೆ ನೀಡಿತ್ತಾದರೂ ಇನ್ನೂ ಬೇಡಿಕೆ ಈಡೇರಿಸಿಲ್ಲ. ಇದರಿಂದಾಗಿ ಇದೀಗ ೨ನೇ ಹಂತದ ಪ್ರತಿಭಟನೆಗೆ ಗ್ರಾಮ ಆಡಳಿತಾಧಿಕಾರಿಗಳು ಮುಂದಾಗಿದ್ದಾರೆ.