ಮುರುಳ್ಯ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಫೆ. 10ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಾಮೂಲೆಯವರ ಅಧ್ಯಕ್ಷತೆಯಲ್ಲಿ ಸ.ಹಿ.ಪ್ರಾ. ಶಾಲೆ ಅಲೆಕ್ಕಾಡಿಯಲ್ಲಿ ನಡೆಯಿತು.









ಅಲೆಕ್ಕಾಡಿ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯ ಬಳಿಕ ಪಂಚಾಯತ್ ಪಿ.ಡಿ.ಒ. ಹೂವಪ್ಪ ಗೌಡ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ 2024-25ನೇ ಸಾಲಿನ ಜಮೆ ಮತ್ತು ಖರ್ಚಿನ ಪಟ್ಟಿ ಮತ್ತು ವಾರ್ಡ್ ಸಭೆಯ ವರದಿ ವಾಚಿಸಿದರು. ಪಂಚಾಯತ್ ನ ಮೂಲಕ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆ ಬದಿಯಲ್ಲಿ ಕಸ ರಾಶಿ ಬೀಳುತ್ತದೆ. ಪಂಚಾಯತ್ ಕಟ್ಟಡದ ಬದಿಯಲ್ಲಿರುವ ಕಟ್ಟಡದಲ್ಲಿ ರಾಶಿ ಹಾಕಿರುವುದರಿಂದ ನಾಯಿಗಳು ಕಸವನ್ನು ರಸ್ತೆ, ಮೈದಾನಕ್ಕೆ ಕಚ್ಚಿಕೊಂಡು ಬರುತ್ತದೆ. ಇದಕ್ಕೆ ಸೂಕ್ತ ಪರಿಹಾರ ಮಾಡಬೇಕೆಂದು ಹಲವು ಸಭಿಕರು ಒತ್ತಾಯಿಸಿದರು. ಘನತ್ಯಾಜ್ಯ ಘಟಕಕ್ಕೆ ಅನುದಾನ ಇರಿಸಲಾಗಿದೆ. ಉದ್ಯೋಗ ಖಾತರಿಯಲ್ಲಿ ಕಾಮಗಾರಿ ನಡೆಯಲಿರುವುದರಿಂದ ಕಾರ್ಮಿಕರು ಮುಂದೆ ಬಾರದೇ ಇರುವುದರಿಂದ ತಡವಾಗಿದೆ. ಕಸವನ್ನು ಬೇರೆ ಕಡೆ ವಿಲೇವಾರಿ ಮಾಡುತ್ತಾ ಇದ್ದೇವೆ ಎಂದು ಪಂಚಾಯತ್ ಪಿಡಿಒ ಮತ್ತು ಸದಸ್ಯರು ಉತ್ತರಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಕು. ಜಾನಕಿ ಶಾಂತಿನಗರ, ಸದಸ್ಯರುಗಳಾದ ಕರುಣಾಕರ ಗೌಡ ಹುದೇರಿ, ಮೋನಪ್ಪ ಗೌಡ ಅಲೇಕಿ, ಸುಂದರ ಗೌಡ ಶೇರ ಪಾಪುತ್ತಡಿ, ಶ್ರೀಮತಿ ಶೀಲಾವತಿ ಗೋಳ್ತಿಲ, ಪುಷ್ಪಲತಾ ಡಿ ಕುಕ್ಕಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.










