ಯುವ ಪ್ರತಿಭೆಗಳು ಬೆಳೆಯಲು ಬೇಸಿಗೆ ಶಿಬಿರ ಪೂರಕವಾಗಿದೆ :ನಿತ್ಯಾನಂದ ಮುಂಡೋಡಿ

ಮಕ್ಕಳು ಬೇಸಿಗೆ ಶಿಬಿರಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ.
ಮಕ್ಕಳಿಗೆ ಆಸಕ್ತಿ ಇರುವುದನ್ನು ಗುರುತಿಸಿ ಬೆಳೆಸಬೇಕು.
ಎಲ್ಲಾ ಮಕ್ಕಳಿಗೆ ಒಂದೇ ವಿಷಯದಲ್ಲಿ ಆಸಕ್ತಿ ಇರುವುದಿಲ್ಲ.ಶಿಬಿರದಲ್ಲಿ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಮಾಡಿರುವುದರಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಅವರು ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಮತ್ತು ಕಲಾ ಮಂದಿರ್ ಡ್ಯಾನ್ಸ್ ಕ್ರೀವ್ ಪಂಜ ಇವುಗಳ ಸಹಯೋಗದಲ್ಲಿ ನಡೆದ ನಲಿ-ಕಲಿ ಮಕ್ಕಳ ಬೇಸಿಗೆ ಶಿಬಿರದ ಎ.19 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ತಂಟೆಪ್ಪಾಡಿ ನಿನಾದ ಕೇಂದ್ರದ ಸಂಚಾಲಕ ವಸಂತ ಶೆಟ್ಟಿಯವರು ಮಾತನಾಡಿ ಇಂದು ಶಿಬಿರಗಳ ಅವಶ್ಯಕತೆಗಳು ಜಾಸ್ತಿಯಾಗುತ್ತಿದೆ.ಮಕ್ಕಳು ಪಾಠದ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಶಿಬಿರಗಳು ಸಹಕಾರಿಯಾಗಿದೆ ಎಂದು ಹೇಳಿದರು.
ಕ್ರಿಯೇಡಿವ್ ಚಿತ್ರಕಲಾ ಶಾಲೆ ಪಂಜ ಇದರ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಅಧ್ಯಕ್ಷತೆ ವಹಿಸಿ ಒಂದು ವಾರ ಯಶಸ್ವಿಯಾಗಿ ಬೇಸಿಗೆ ಶಿಬಿರ ನಡೆಯಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.















ಆರು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಚಲನ ಚಿತ್ರ ನಟಿ ಕರಿಷ್ಮಾ ಅಮೀನ್ ರವರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಮಕ್ಕಳ ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಲಯನ್ಸ್ ಜಿಲ್ಲೆ ಪೂರ್ವ ವಲಯ ಅಧ್ಯಕ್ಷ ಸಂತೋಷ್ ಜಾಕೆ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಪಳಂಗಾಯ , ಕಲಾ ಮಂದಿರ ಬೆಳ್ಳಾರೆ ಇದರ ನಿರ್ದೇಶಕ ಪ್ರಮೋದ್ ರೈ ಬೆಳ್ಳಾರೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ,ಚಿನ್ನಪ್ಪ ಸಂಕಡ್ಕ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಸೋಮಶೇಖರ ನೇರಳ ಮತ್ತು ಶ್ರೀಮತಿ ಕವಿತಾ ನೇರಳ ಕಾರ್ಯಕ್ರಮ ನಿರೂಪಿಸಿದರು.










