ಕಾಶ್ಮೀರದ ಪಹಲ್ಲಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಖಂಡನೆ

0

ಹರಿಹರ ಪಲ್ಲತಡ್ಕದಲ್ಲಿ ಪಂಜಿನ ಮೆರವಣಿಗೆ, ಶ್ರದ್ಧಾಂಜಲಿ ಸಭೆ

ಕಾಶ್ಮೀರದ ಪಹಲ್ಲಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹರಿಹರ ಪಳ್ಳತ್ತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮದ ಗ್ರಾಮಸ್ಥರಿಂದ ಹಿಂದೂ ಪರಿವಾರ ಸಂಘಟನೆಗಳು ಹರಿಹರ ಪಳ್ಳತ್ತಡ್ಕ ಇದರ ನೇತೃತ್ವದಲ್ಲಿ ಏ.30 ರಂದು ಸಂಜೆ ಹರಿಹರ ಪಳ್ಳತ್ತಡ್ಕ ಮುಖ್ಯ ಪೇಟೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ಶ್ರದ್ಧಾಂಜಲಿ ಸಭೆ ನಡೆಯಿತು.

ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಪಂಜಿನ ಮೆರವಣಿಗೆ ಹೊರಟು ಹರಿಹರ ಪೇಟೆಗೆ ಬಂದು ಹರಿಹರ ಮುಖ್ಯ ಪೇಟೆಯಲ್ಲಿ ಸೇರಿ ಕಾಶ್ಮೀರದ ಪಹಲ್ಲಾಮ್ ನಲ್ಲಿ ಉಗ್ರರಿಂದ ಹತ್ಯೆಯಾದ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಪದ್ಮಕುಮಾ‌ರ್ ಗುಂಡಡ್ಕ ರವರು “ಪಾಕಿಸ್ತಾನದ ಕುತಂತ್ರ ಬುದ್ದಿಗೆ ತಕ್ಕ ಪಾಠ ಕಲಿಸಬೇಕು. ಮುಂದೆ ಪಾಕಿಸ್ತಾನ ತನ್ನ ನರಿ ಬುದ್ಧಿ ಬಿಟ್ಟು ಬದುಕಲು ಕಲಿಯಲಿ, ಇಲ್ಲದಿದ್ದರೆ ಮುಂದೆ ಭಾರತ ಕೊಡುವ ಎಲ್ಲಾ ಏಟುಗಳನ್ನು ತಿನ್ನಲು ತಯಾರಾಗಬೇಕಾದೀತು” ಎಂದರು.

ನಂತರ ಮಾತನಾಡಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಕುಸುಮಾಧರ.ಎ.ಟಿ ರವರು “ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಏ‌ರ್ ಸ್ಟೈಕ್ ಹಾಗೂ ಸರ್ಜಿಕಲ್ ಸ್ಟೈಕ್ ಮುಖಾಂತರ ತನ್ನ ಶಕ್ತಿಯನ್ನು ತೋರಿಸಿದೆ, ಆದರೂ ಪಾಕಿಸ್ತಾನ ಮತ್ತೆ ಮತ್ತೆ ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿ ತಪ್ಪು ಮಾಡಿದೆ. ನಮ್ಮ ದೇಶವನ್ನು ಕೆಣಕಿದರೆ ಮುಂದೆ ಗಂಭೀರ ಪರಿಣಾಮವನ್ನು ಎದುರಿಸಲು ಸಿದ್ಧವಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಎಲ್ಲಾ ಉನ್ನತ ಅಧಿಕಾರಿಗಳ ಸಭೆ ಕರೆದು ಸೇನೆಗೆ ಪೂರ್ಣ ಅಧಿಕಾರ ನೀಡಿದ್ದಾರೆ. ಮುಂದೆ ಪಾಕಿಸ್ತಾನ ತನ್ನ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ. ಉಗ್ರವಾದವನ್ನು ಬುಡಸಮೇತ ಕಿತ್ತುಹಾಕುವ ತನಕ ನಮ್ಮ ದೇಶ ಹಾಗೂ ನಮ್ಮ ಸೇನೆ ವಿರಮಿಸುವುದಿಲ್ಲ” ಎಂದರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಡಾlಸೋಮಶೇಖ‌ರ್ ಕಟ್ಟೆಮನೆ, ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ಹರಿಹರ ಪಳ್ಳತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾ. ಪಂ. ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳು, ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು, ಐದು ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.