ಮೇ.10,11 ರಂದು ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ ರಜತ ಮಹೋತ್ಸವ

0

ಐವರು ಹಿರಿಯ ಮಹಿಳಾ ಸಾಧಕಿಯರಿಗೆ ಸಾರ್ಥಕ ಮಾನಿನಿ ಪ್ರಶಸ್ತಿ

ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿ ಹಬ್ಬ ಆಚರಣೆ ರಜತ ಸಂಭ್ರಮ ಮೇ.10 ಮತ್ತು 11 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ನಡೆಯಲಿದೆ ಎಂದು ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಮತ್ತು ಬೆಳ್ಳಿಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ ಜೆ. ರೈ ತಿಳಿಸಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಮೇ.3 ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು ಮೇ.10ರಂದು ಸಂಜೆ
7 ಕ್ಕೆ ಬೆಳ್ಳಿಹಬ್ಬ ಆಚರಣೆಯನ್ನು ಸುಳ್ಯ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್‌ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಸದಸ್ಯರು ಹಾಗೂ ಬೆಳ್ಳಿಹಬ್ಬ ಆಚರಣಾ ಸಮಿತಿಯ ಗೌರವಾಧ್ಯಕ್ಷರಾಗಿರುವ ಶ್ರೀಮತಿ ಸರೋಜಿನಿ ಪೆಲತಡ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತಾ ಗೋಪಿನಾಥ್‌, ಲಯನ್ಸ್ ವಲಯಾಧ್ಯಕ್ಷೆ ಲ.ರೂಪಶ್ರೀ ಜೆ. ರೈ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.

ಇದಕ್ಕೂ ಮುನ್ನ ಜಟ್ಟಿಪಳ್ಳ ಸ್ವಾಗತ ದ್ವಾರದಿಂದ ಜಟ್ಟಿಪಳ್ಳ ಶಾಲೆಯಲ್ಲಿ ಬೆಳ್ಳಿ ಹಬ್ಬ ಮೆರವಣಿಗೆ ನಡೆಯಲಿದೆ. ಸುಳ್ಯ ಪೊಲೀಸ್ ಠಾಣೆಯ ಕ್ರೈಂ ಪೋಲೀಸ್ ಉಪನಿರೀಕ್ಷಕರಾದ ಸರಸ್ವತಿ ಬಿ.ಟಿ.ಯವರು ಚಾಲನೆ ನೀಡಲಿದ್ದಾರೆ. ಬೆಳ್ಳಿಹಬ್ಬದ ಧ್ವಜಾರೋಹಣವನ್ನು ಜಟ್ಟಿಪಳ್ಳ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ವರ್ಣಕಲಾ ನೆರವೇರಿಸುವರು.

ಇದೇ ಸಂದರ್ಭದಲ್ಲಿ ಯುವಸದನ ಕಟ್ಟಡದ ಬಳಿ ಸರೋಜಿನಿ ಪೆಲತ್ತಡ್ಕ ಅವರ ಅನುದಾನ ರೂ 3.5 ಲಕ್ಷದಲ್ಲಿ ನಿರ್ಮಿಸಿದ ತಡೆಗೋಡೆಯ ಉದ್ಘಾಟನೆ ಹಾಗೂ ಸಾರ್ವಜನಿಕ ಶೌಚಾಲಯಕ್ಕೆ ಗುದ್ದಲಿ ಪೂಜೆ ನಡೆಯಲಿದೆ. 6.30ರಿಂದ ಕೆ.ಆರ್ ಗೋಪಾಲಕೃಷ್ಣ ಮತ್ತು ಶುಭದಾ ಆರ್. ಪ್ರಕಾಶ್ ರವರಿಂದ ಭಾವಗಾನ ಕಾಯಕ್ರಮ, ರಾತ್ರಿ 9 ರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಮೇ.11ರಂದು ಸುಳ್ಯ ತಾಲೂಕು ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ” ಮಹಿಳಾ ರಜತ ಸಂಭ್ರಮ ” ವಿಚಾರಗೋಷ್ಠಿ’ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಪೂರ್ವಾಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವರು ವಹಿಸುವರು. ಶ್ರೀಮತಿ ಲೀಲಾ ದಾಮೋದರ್ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹಿಳೆ ಎಂಬ ವಿಚಾರವಾಗಿ ವಿಷಯ ಮಂಡನೆ ಮಾಡುವರು. ಡಾ.ಅನುರಾಧ ಕುರುಂಜಿಯವರು ಜಾಗೃತಿ ಮತ್ತು ಅಭಿವೃದ್ಧಿಯತ್ತ ಮಹಿಳೆ ಎಂಬ ವಿಚಾರದ ಬಗ್ಗೆ ವಿಷಯ ಮಂಡನೆ ಮಾಡುವರು.

ಸಂಜೆ ರಜತ ಸಂಭ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಸಾಧಕರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಭಾಗವಹಿಸಲಿದ್ದಾರೆ. ಬೆಳ್ಳಿಹಬ್ಬದ ಸಮಾರೋಪ ಭಾಷಣವನ್ನು ಕೆ.ವಿ.ಜಿ. ಅಮರಜ್ಯೋತಿ ಪ.ಪೂ.ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರರು ಮಾಡಲಿದ್ದು, ರಜತ ಸಂಭ್ರಮದ ನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆ ‘ಮಾನಿನಿ’ ಯನ್ನು ಸುಳ್ಯ ಮಹಿಳಾ ಸಮಾಜದ ಅಧ್ಯಕ್ಷೆ
ಶ್ರೀಮತಿ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಆರು ಜನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಗುವುದು.

ಸಾರ್ಥಕ ಮಾನಿನಿ ಪ್ರಶಸ್ತಿ: ಬೆಳ್ಳಿಹಬ್ಬ ‘ರಜತ ಸಂಭ್ರಮ’ ಆಚರಣೆಯ ನೆನಪಿಗಾಗಿ ಸುಳ್ಯದಲ್ಲಿ ಈ ಹಿಂದೆ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಮಹಿಳೆಯರ ಅಭ್ಯುದಯಯಕ್ಕಾಗಿ ದುಡಿದ ಸಾಧಕ ಹಿರಿಯ ಮಹಿಳೆಯರಾದ ಶ್ರೀಮತಿ ಎಂ.ಮೀನಾಕ್ಷಿ ಗೌಡ, ಶ್ರೀಮತಿ ಸುಮಾ ಸುಬ್ಬರಾವ್, ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ, ಶ್ರೀಮತಿ ನೇತ್ರಾವತಿ ಪಡ್ಡಂಬೈಲು, ಶ್ರೀಮತಿ ಕೆ.ಜಿ.ದೇವಿಕುಮಾರಿ ಅವರಿಗೆ ‘ಸಾರ್ಥಕ ಮಾನಿನಿ’ ಪ್ರಶಸ್ತಿಯನ್ನು ಅವರ ಮನೆಗಳಿಗೆ ತೆರಳಿ ನೀಡಿ ಗೌರವಿಸಲಾಗುವುದು ಎಂದು ಚಂದ್ರಾಕ್ಷಿ ರೈ ಹಾಗೂ ಚಿತ್ರಲೇಖ ಮಡಪ್ಪಾಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್‌, ಕೋಶಾಧಿಕಾರಿ ಶ್ರೀಮತಿ ಸವಿತಾ ಲಕ್ಷ್ಮಣ ಆಚಾರ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶ್ರೀಮತಿ ಜಯಂತಿ ಆರ್.ರೈ ಹಾಗೂ ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.