ಮಹಿಳೆ ಮೃತ್ಯು ; 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ಹಲವು ಗಾಯಾಳುಗಳು ಗಂಭೀರ; ಮಂಗಳೂರಿಗೆ ರವಾನೆ
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡಿನ ಕೊಡಂಕೇರಿ ಎಂಬಲ್ಲಿ ಇಂದು ಸಂಜೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ KA 21 F 0069 ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ ಗೆ, ಮಡಿಕೇರಿ ಕಡೆಯಿಂದ – ಸುಳ್ಯ ಮಾರ್ಗವಾಗಿ ಬರುತ್ತಿದ್ದ KA 19 F 3620 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿ ಹೊಡೆದು ಅಪಘಾತವಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ಕುಶಾಲನಗರ ಮೂಲದ ಭಾರತಿ ( 50 ) ಎಂಬ ಮಹಿಳೆ ಮೃತಪಟ್ಟಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳುಗಳ ಕೆಲವರ ಸ್ಥಿತಿ ಗಂಭೀರವಾಗಿದ್ದು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಡಿಕೇರಿ ಮೂಲದ ಚೈತ್ರಾ ಎಂಬ ಯುವತಿ ಸಹಿತ ಕೆಲವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.















ಅಪಘಾತದಲ್ಲಿ ಬಸ್ ನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ಹೊರಕ್ಕೆ ತೆಗೆದು ಆಂಬ್ಯುಲೆನ್ಸ್, ರಿಕ್ಷಾ ಗಳ ಮೂಲಕ ಸುಳ್ಯ ಆಸ್ಪತ್ರೆಗೆ ಕರೆ ತಂದರು.
ಇದೀಗ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ.










