ಕೊಲ್ಲಮೊಗ್ರು ಗ್ರಾ.ಪಂ. ಸದಸ್ಯತನಕ್ಕೆ ತಾವು ಸಲ್ಲಿಸಿದ್ದ ರಾಜೀನಾಮೆಯನ್ನು ಜಯಶ್ರೀ ಚಾಂತಾಳ ಹಾಗೂ ಅಶ್ವಥ್ ಯಲದಾಳು ವಾಪಸ್ಸು ಪಡೆದಿರುವುದಾಗಿ ತಿಳಿದುಬಂದಿದೆ.
ಕೊಲ್ಲಮೊಗ್ರ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ ನಡೆಸಿರುವವರ ಮೇಲೆ ಪೋಲೀಸ್ ದೂರು ನೀಡಬೇಕೆಂದು ಅಸಗ್ರಹಿಸಿ ಸೆ. 25 ರಂದು ಪಂಚಾಯತ್ ಎದುರು ಸಾರ್ವಜನಿಕರ ಪ್ರತಿಭಟನೆ ನಡೆದಾಗ, ಹೋರಾಟಕ್ಕೆ ಬೆಂಬಲವಾಗಿ ಮಾಜಿ ಅಧ್ಯಕ್ಷರೂ ಆದ ಪಂಚಾಯತ್ ಸದಸ್ಯೆ ಜಯಶ್ರೀ ಚಾಂತಾಳ ಹಾಗೂ ಇನ್ನೋರ್ವ ಸದಸ್ಯ ಅಶ್ವಥ್ ಯಲದಾಳು ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದರು.















ಸೆ.30 ರಂದು ಗ್ರಾ.ಪಂ.ಮಾಸಿಕ ಸಭೆ ನಡೆದಾಗ ಅವರಿಬ್ಬರೂ ಸಭೆಗೆ ಹಾಜರಾದರಲ್ಲದೆ, ತಾವು ರಾಜಿನಾಮೆ ವಾಪಸ್ ಪಡೆಯುವುದಾಗಿ ಹೇಳಿದರು. ಈ ಬಗ್ಗೆ ಲಿಖಿತ ಮನವಿಯನ್ನು ಪಂಚಾಯತ್ ಅಧ್ಯಕ್ಷರಿಗೆ ನೀಡಿರುವ ಅವರು ” ಪ್ರತಿಭಟನೆ ನಡೆದ ಬಳಿಕ ಪಂಚಾಯತಲ್ಲಿ ಭ್ರಷ್ಟಾಚಾರ ನಡೆಸಿರುವವರ ಮೇಲೆ ಪಿ.ಡಿ.ಒ. ಪೋಲೀಸ್ ದೂರು ನೀಡಿದ್ದಾರೆ. ಅದಲ್ಲದೆ ಈಗ ನಾವು ರಾಜೀನಾಮೆ ನೀಡಿದರೆ ಆ ವಾರ್ಡಿಗೆ ಮರುಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಹಣ ಖರ್ಚಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ ನಾವು ನಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುತ್ತೇವೆ” ಎಂದು ಅವರು ಬರೆದಿದ್ದಾರೆ.
ಈ ಬಗ್ಗೆ ಜಯಶ್ರೀ ಯವರನ್ನು ಸುದ್ದಿ ಸಂಪರ್ಕಿಸಿ ವಿಚಾರಿಸಿದಾಗಲೂ ಅದನ್ನೇ ಹೇಳಿದರಲ್ಲದೆ , ” ಕ್ರಮ ತೆಗೆದುಕೊಳ್ಳಲು ನಾವು ಹೇಳುವಾಗಲೂ ಅಧ್ಯಕ್ಷರು, ಸ್ಟಾಫ್ ಸಂತೋಷ್ ರನ್ನು ಏನೂ ಕ್ರಮ ತೆಗೆದುಕೊಳ್ಳದೆ ಬೆಂಬಲಿಸಿದ್ದಾರೆ. ಅದಕ್ಕಾಗಿ ರಾಜೀನಾಮೆ ಸಲ್ಲಿಸಿದ್ದೆವು. ಈಗ ಪೋಲೀಸ್ ದೂರುಗಳು ದಾಖಲಾಗಿರುವುದರಿಂದ ರಾಜೀನಾಮೆ ಹಿಂಪಡೆಯುತ್ತಿದ್ದೇವೆ” ಎಂದರು.
ಆಶ್ವಥ್ ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಕಣ್ಕಟ್ಟಿಗೆ ರಾಜೀನಾಮೆ ನೀಡಿದ್ದರಂತೆ : ಅಧ್ಯಕ್ಷರು
ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿಯರು ಸುದ್ದಿಯನ್ನು ಸಂಪರ್ಕಿಸಿ ” ಅವರಿಬ್ಬರೂ ಮೊನ್ನೆ ಪ್ರತಿಭಟನೆ ದಿನ ರಾಜೀನಾಮೆ ನೀಡಿ ಇಂದು ವಾಪಸ್ಸು ಪಡೆದಿದ್ದಾರೆ. ಈ ಬಗ್ಗೆ ನಾನು ಅಶ್ವಥ್ ರನ್ನು ಪ್ರಶ್ನಿಸಿದಾಗ ” ಮೊನ್ನೆ ದಿನ ಕಣ್ಣುಕಟ್ಟಿಗೆ ರಾಜೀನಾಮೆ ನೀಡಿದ್ದೆವು. ಅದನ್ನು ವಾಪಸ್ ಪಡೆಯಲು ಪತ್ರ ಕೊಟ್ಟಿದ್ದೇವೆ ” ಎಂದು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.










