ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿಯ ಖಂಡನೆ ಮತ್ತು ಕಾನೂನು ಕ್ರಮಕ್ಕೆ ಒತ್ತಾಯ: ಪ್ರಜಾಧ್ವನಿ ಕರ್ನಾಟಕ

0

ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಬಿಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದಿರುವ ಕೀಳುಕೃತ್ಯವನ್ನು ಪ್ರಜಾಧ್ವನಿ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯು ಕೇವಲ ವೈಯಕ್ತಿಕ ದಾಳಿಯಷ್ಟೇ ಅಲ್ಲ, ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಇಂತಹ ಕೃತ್ಯಗಳು ದೇಶದ ಸಾರ್ವಭೌಮತ್ವ, ಸಮಾಜದ ಸಮಾನತೆಯ ಆಶಯ ಮತ್ತು ನಾಗರಿಕರ ಹಕ್ಕುಗಳಿಗೆ ಗಂಭೀರ ಧಕ್ಕೆ ತರುತ್ತವೆ.

ನ್ಯಾಯಾಲಯವು ಶೋಷಿತರ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ಆಡಳಿತದ ಆಧಾರಸ್ತಂಭವಾಗಿದೆ. ಈ ಘಟನೆಯಂತಹ ಕೃತ್ಯಗಳು ನ್ಯಾಯಾಲಯದ ಘನತೆಯನ್ನು ಕೆಡಿಸುವುದರ ಜೊತೆಗೆ ಸಾಮಾಜಿಕ ನ್ಯಾಯದ ಆದರ್ಶಗಳಿಗೆ ಚ್ಯುತಿ ತರುತ್ತವೆ. ಆದ್ದರಿಂದ, ಪ್ರಜಾಧ್ವನಿ ಕರ್ನಾಟಕ ಸರಕಾರವನ್ನು ಈ ಕೃತ್ಯದ ವಿರುದ್ಧ ಕಾನೂನು ಕಾಯ್ದೆಯಡಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸೂಕ್ತ ಕಾನೂನು ಚೌಕಟ್ಟನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತದೆ.

ನ್ಯಾಯಾಲಯದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸರ್ವೋಚ್ಚ ನ್ಯಾಯಾಲಯವು ದೇಶದ ನ್ಯಾಯದ ಮೂಲಾಧಾರವಾಗಿದ್ದು, ಇದರ ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಎಲ್ಲರೂ ಹೊಂದಿರುತ್ತಾರೆ. ಸರಕಾರ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಈ ವಿಷಯದಲ್ಲಿ ತುರ್ತು ಕಾನೂನು ಕ್ರಮಕ್ಕೆ ಕರೆ ನೀಡುತ್ತದೆ ಎಂದು ಪ್ರಜಾಧ್ವನಿ ಕರ್ನಾಟಕ ಅಧ್ಯಕ್ಷರಾದ, ಅಶೋಕ ಎಡಮಲೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ