ಕಲ್ಚೆರ್ಪೆಯಲ್ಲಿ ತುಂಬುತ್ತಿರುವ ಕಸ : ನಿವಾಸಿಗಳ ಆಕ್ರೋಶ : ನ.ಪಂ. ಎದುರು ಪ್ರತಿಭಟನೆ
ಸುಳ್ಯ ನಗರ ಪಂಚಾಯತ್ನವರು ನಗರದಿಂದ ಕಸವನ್ನು ಸಂಗ್ರಹಿಸಿ ಕಲ್ಚೆರ್ಪೆಯಲ್ಲಿ ಸುರಿಯುತ್ತಿದ್ದು ಕಸ ದೊಡ್ಡ ರಾಶಿಯಂತಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಬಾರೀ ಸಮಸ್ಯೆ ಎದುರಿಸುತ್ತಿದ್ದು, ಬೇಸರಗೊಂಡಿರುವ ನಿವಾಸಿಗಳು ಇಂದು ನಗರ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರಲ್ಲದೆ, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.















ನ.ಪಂ. ಎದುರಿನ ಮೆಟ್ಟಿಲ ಮೇಲೆ ಕುಳಿತ ಕಲ್ಚೆರ್ಪೆ ಪರಿಸರದ ನಿವಾಸಿಗಳಾದ ಅಶೋಕ್ ಪೀಚೆ, ಆಲೆಟ್ಟಿ ಗ್ರಾ.ಪಂ. ಸದಸ್ಯ ಸುದೇಶ್ ಅರಂಬೂರು, ಬಾಲಚಂದ್ರ ಕಲ್ಚೆರ್ಪೆ, ನಾರಾಯಣ ಜಬಳೆ, ಅಶೋಕ ಕುತ್ಯಾಳರವರು ನ.ಪಂ. ಮೇಲೆ ಆಕ್ರೊಶ ವ್ಯಕ್ತ ಪಡಿಸಿದರು. ನಗರ ಪಂಚಾಯತ್ ಮುಂಭಾಗದ ಶೆಡ್ ನಲ್ಲಿದ್ದ ಕಸವನ್ನು ತೆಗೆದಿದ್ದಾರೆ. ಇದೀಗ ಕಲ್ಚೆರ್ಪೆಯಲ್ಲಿ ತಂದು ರಾಶಿ ಹಾಕುತ್ತಿದ್ದಾರೆ. ಇದರಿಂದ ಬಾರೀ ಸಮಸ್ಯೆ ಎದುರಾಗಿದ್ದು ಅಲ್ಲಿ ಇರಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾ ಕಾರರು ಬೇಸರ ವ್ಯಕ್ತ ಪಡಿಸಿದರು. ಈ ಪ್ರತಿಭಟನೆಯ ವಿಷಯ ತಿಳಿದ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆಯವರು ಪಂಚಾಯತ್ಗೆ ಬಂದು ಅಹವಾಲು ಆಲಿಸಿದರು. ಮುಖ್ಯಾಧಿಕಾರಿ ಬಸವರಾಜರು ಬಂದರು. ಈ ವೇಳೆ ಪ್ರತಿಭಟನೆಯಲ್ಲಿ ಕುಳಿತಿದ್ದವರು,ನಗರ ಪಂಚಾಯತ್ನವರು ನುಡಿದಂತೆ ನಡೆಯುವುದಿಲ್ಲ. ಕಸವನ್ನು ವ್ಯವಸ್ಥಿತವಾಗಿ ವಿಲೇ ಮಾಡುವುದಾಗಿ ಹೇಳಿ ಅಲ್ಲಿ ತಂದು ರಾಶಿ ಹಾಕುತ್ತಿದ್ದಾರೆ. ಪ್ಲಾಸ್ಟಿಕನ್ನು ಹಾಗೇ ಸುಡುತ್ತಿರುವುದರಿಂದ ಪರಿಸರವೆಲ್ಲ ಕೆಟ್ಟ ವಾಸನೆ ಬರುತ್ತಿದೆ. ನಾವು ಜೀವಿಸುವುದಾದರೂ ಹೇಗೆ.
ಪಂಚಾಯತ್ನ ಆಡಳಿತ ಮತ್ತು ಅಧಿಕಾರಿಗಳು ಬಂದು ಒಂದು ದಿನ ಅಲ್ಲಿ ನಿಲ್ಲಬಹುದಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಈಗ ಕಸ ಹಾಕುತ್ತಿರುವ ಜಾಗ ನಗರ ಪಂಚಾಯತ್ಗೆ ಸೇರಿದ್ದು ಅಲ್ಲವೇ ಅಲ್ಲ. ಮತ್ತು ಕಾನೂನು ಪ್ರಕಾರ ಯಾವುದೇ ಕೆಲಸ ಅಲ್ಲಿ ಮಾಡುತ್ತಿಲ್ಲ. ನೀವು ಅದೇ ಜಾಗದಲ್ಲಿ ಕಸ ಹಾಕುವುದಿದ್ದರೆ ನಿಮ್ಮ ದಾಖಲೆಗಳನ್ನು ತೋರಿಸಿದ ಮೇಲೆಯೇ ಹಾಕಬೇಕು. ಅಲ್ಲಿ ತನಕ ಕಸ ಹಾಕಲು ನಾವು ಬಿಡುವುದಿಲ್ಲ” ಎಂದು ಹೇಳಿದರು. ಅಹವಾಲು ಸ್ವೀಕರಿಸಿದ ಅಧ್ಯಕ್ಷರು, `ಅಲ್ಲಿರುವ ಕಸ ಸಾಗಾಟಕ್ಕೆ ಟೆಂಡರ್ ಕರೆಯಲಾಗಿದೆ. ಅದನ್ನು ಸಾಗಿಸಲಾಗುವುದು. ಬರ್ನಿಂಗ್ ಮಿಷನ್ ಹಾಳಾಗಿದೆ. ನಮಗೆ ಕಸ ಹಾಕಲು ಬೇರೆ ಜಾಗ ಇಲ್ಲ. ನಾವು ತಹಶೀಲ್ದಾರಲ್ಲಿ ಜಾಗ ಗುರುತಿಸುವಂತೆ ಹೇಳಿzವೆ. ಇನ್ನೂ ಜಾಗ ಆಗಿಲ್ಲ. ನಿಮಗೂ ಸಮಸ್ಯೆ ಆಗಬಾರದು ಆ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇವೆ. ಕಾಲಾವಕಾಶ ಬೇಕು ಎಂದು ಹೇಳಿದರಲ್ಲದೆ,‘ನಾವು ಕಸ ಹಾಕುವ ಜಾಗ ಪಂಚಾಯತ್ನಲ್ಲ ಎಂದು ನೀವು ಹೇಳುವುದಾದರೆ ದಾಖಲೆ ಪರಿಶೀಲಿಸುತ್ತೇವೆ” ಎಂದು ಅಧ್ಯಕ್ಷರು ಹೇಳಿದರು.



