ಸುಳ್ಯ ನಗರ ಪಂಚಾಯತ್‌ನ ಸಾಮಾನ್ಯ ಸಭೆ

0

ಕಲ್ಚರ್ಪೆ ಕಸ ಬರ್ನಿಂಗ್ ಸಮಸ್ಯೆ, ಪುರಭವನದ ದಾಖಲೆ ಪತ್ರ ಕಾಣೆ, ಬೀದಿ ನಾಯಿಗಳ ಹಾವಳಿಗಳ ಕುರಿತು ಗಂಭೀರ ಚರ್ಚೆ

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನೀರ ಬಿದಿರೆ ಅವರ ಅಧ್ಯಕ್ಷತೆಯಲ್ಲಿ ಅ.೨೭ರಂದು ನಗರ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ನ. ಪಂ ಉಪಾಧ್ಯಕ್ಷ ಬುದ್ಧನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರಿ ಶೇಠ್ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್, ಇಂಜಿನಿಯರ್ ಶಿವಕುಮಾರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಂಕೇರಿ, ಧೀರ ಕ್ರಾಸ್ತಾ, ಎಂ ವೆಂಕಪ್ಪಗೌಡ, ಶರೀಫ್ ಕಂಠಿ,ಉಮ್ಮರ್ ಕೆ ಎಸ್, ನಾರಾಯಣ ಶಾಂತಿನಗರ, ಬಾಲಕೃಷ್ಣ ರೈ, ಶೀಲಾ ಕುರುಂಜಿ ಪವಿತ್ರ ಪ್ರಶಾಂತ್, ವಾಣಿಶ್ರೀ, ಸುಶೀಲ ಜಿನ್ನಪ್ಪ ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಕಲ್ಚರ್ಪೆ ಕಸದ ಬರ್ನಿಂಗ್ ಸ್ಥಳದ ವಿಷಯದ ಕುರಿತು ಚರ್ಚೆಗಳು ನಡೆದು ಕಲ್ಚರ್ಪೆಯ ಅಭಿವೃದ್ಧೀಕರಣಕ್ಕೆ ನೂತನವಾಗಿ ಮಂಜೂರು ಗೊಂಡಿರುವ ಒಂದು ಕೋಟಿ ಮೂರು ಲಕ್ಷ ರೂ.ಗಳ ಅನುದಾನದ ಬಗ್ಗೆ ಚರ್ಚೆ ಆರಂಭವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಪ್ಪ ಗೌಡರು ಸ್ಥಳೀಯ ಊರಿನವರು ಈಗಾಗಲೇ ಅಲ್ಲಿಯ ಅವ್ಯವಸ್ಥೆಯ ಕುರಿತು ನಗರ ಪಂಚಾಯತಿ ಮುಂಭಾಗಕ್ಕೆ ಬಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ವ್ಯವಸ್ಥೆಗಳು ಯಾವುದು ಸರಿ ಇಲ್ಲ ಎಂದು ಅವರು ಕಳೆದ ಹಲವಾರು ಸಮಯಗಳಿಂದ ಪ್ರತಿಭಟನೆಯನ್ನು ಮಾಡುತ್ತಲೇ ಬರುತ್ತಿದ್ದಾರೆ.


ಈಗಿರುವಾಗ ಪುನಃ ನೂತನವಾಗಿ ಒಂದು ಕೋಟಿಗೂ ಹೆಚ್ಚಿನ ಅನುದಾನವನ್ನು ತರಿಸಿ ಅಲ್ಲಿ ಕೆಲಸ ಮಾಡಿಸಿ ಮತ್ತೆ ಏನಾದರೂ ಸಮಸ್ಯೆ ಆದಲ್ಲಿ ಜನರ ದುಡ್ಡನ್ನು ಪೋಲ್ ಮಾಡಿದಂತೆ ಆಗುತ್ತದೆ.
ಆದ್ದರಿಂದ ಆ ಹಣವನ್ನು ಬೇರೆ ಯಾವುದಕ್ಕಾದರೂ ಉಪಯೋಗಿಸಲು ಸಾಧ್ಯವೇ ಎಂದು ನೋಡಿ ಎಂದರು.
ಅಲ್ಲದೆ ಅಲ್ಲಿ ಇರುವ ೯೪ ಸೆನ್ಸ್ ಜಾಗದಲ್ಲಿ ಮಾತ್ರ ನಮ್ಮ ಕಾರ್ಯ ಚಟುವಟಿಕೆಗಳು ನಡೆಯುತ್ತಿದೆ. ನಮ್ಮ ಬೇಡಿಕೆಯ ಎರಡು ಎಕ್ರೆ ಜಾಗ ಇನ್ನೂ ನಮ್ಮ ಅಧೀನಕ್ಕೆ ಬರಲಿಲ್ಲ. ಆದ್ದರಿಂದ ಏನು ಮಾಡುವುದಾದರೂ ಆಲೋಚನೆಯಿಂದ ಮಾಡಿ ಎಂದು ಸಲಹೆಯನ್ನು ನೀಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಕೆ ಎಸ್ ಉಮರ್ ರವರು ೨೦೦೮ – ೨೦೦೯ ರಿಂದ ಇಂದಿನವರೆಗೆ ಸುಮಾರು ಎರಡು ಕೋಟಿ ರೂಪಾಯಿಯನ್ನು ಈಗಾಗಲೇ ನೀವು ಅಲ್ಲಿ ಖರ್ಚು ಮಾಡಿದ್ದೀರಿ. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಮತ್ತೆ ಪುನಃ ನೀವು ಈ ಒಂದು ಕೋಟಿ ಹಣವನ್ನು ಹಲ್ಲಿ ಸುರಿದು ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನೆಯನ್ನು ಮಾಡಿದರು.


ಅಲ್ಲಿರುವ ವ್ಯವಸ್ಥೆಯನ್ನು ಸರಿ ಮಾಡದೇ ಇದ್ದಾಗ ಸ್ಥಳೀಯ ನಿವಾಸಿಗಳು ಪ್ರಶ್ನೆ ಮಾಡುವುದು ಸಹಜ.ವಿರೋಧ ಪಕ್ಷದ ಸದಸ್ಯರಾಗಿ ನಾವು ಕೂಡ ಕಸ ವಿಲೇವಾರಿಗೆ ನಿಮ್ಮ ಜೊತೆ ಅಂದರೆ ಆಡಳಿತ ಪಕ್ಷದ ಸದಸ್ಯರ ಜೊತೆ ಸೇರಿಕೊಂಡು ಸಹಕಾರ ಮಾಡಿದೆವು. ಆದರೂ ಅದರ ಸರಿಯಾದ ಪ್ರಯೋಜನವನ್ನು ನೀವು ಪಡೆದುಕೊಂಡಿಲ್ಲ. ಮತ್ತು ಅದಕ್ಕೆ ಬೇಕಾದ ಸರಿಯಾದ ವ್ಯವಸ್ಥೆಯನ್ನು ನೀವು ಮಾಡಿಲ್ಲ. ಸುಳ್ಯದ ನಗರ ಪಂಚಾಯತಿಗೆ ಸಂಬಂಧಪಟ್ಟಂತೆ ಸುಳ್ಯದವರೇ ಮುಖ್ಯಮಂತ್ರಿ ಆಗಿದ್ದರು ಕಳೆದ ೩೦ ವರ್ಷಗಳಿಂದ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಯಾರೇ ಏನೇ ಆಗಿದ್ದರು ಸುಳ್ಯದ ಕಸವನ್ನ ಮಾತ್ರ ಇಂದಿನವರೆಗೆ ಸರಿ ಮಾಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕಳೆದ ೧೭ ವರ್ಷದಿಂದ ಕಸಕ್ಕೆ ಒಂದು ಮುಕ್ತಿಯನ್ನು ಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ.ಅಲ್ಲಿ ಇರುವ ೪೪ ಸೆನ್ಸ್ ಜಾಗದಲ್ಲಿ ಎರಡು ಕೋಟಿಯನ್ನು ಖರ್ಚು ಮಾಡಿದ್ದೀರಿ ಇನ್ನು ಉಳಿದ ಒಂದು ಕೋಟಿ ಅನುದಾನವನ್ನು ಮತ್ತೆ ಅಲ್ಲಿ ಹಾಕಿ ಅದನ್ನು ಯಾವ ರೀತಿ ನಿರ್ವಹಣೆ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದರು.

ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ರವರು ಪುರ ಭವನ ಅಭಿವೃದ್ಧಿ ಬಗ್ಗೆ ಮಾತನಾಡಿ ಕಳೆದ ಮೂರು ನಾಲ್ಕು ಸಭೆಗಳಿಂದ ನಾವು ಅದರ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದೇವೆ.ಆದರೆ ಇದೀಗ ಅದರ ದಾಖಲೆ ಪತ್ರವೇ ಇಲ್ಲ ಎಂಬ ಮಾತನ್ನು ಪಂಚಾಯಿತಿಯಿಂದ ಕೇಳಿ ಬರುತ್ತಿದೆ. ಹಾಗಾದರೆ ಅದರ ದಾಖಲೆ ಪತ್ರ ಏನಾಯಿತು ಎಲ್ಲಾದರೂ ಯಾರಿಗಾದರೂ ಮಾರಾಟ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ದುರಸ್ತಿಯಲ್ಲಿರುವ ಕಟ್ಟಡಕ್ಕೆ ಐದು ಕೋಟಿ ರೂಪಾಯಿ ವೆಚ್ಚದ ಯೋಜನೆಯ ರೂಪಿಸಿ ಸಂಬಂಧಪಟ್ಟ ಸಚಿವರಿಂದ ಅನುದಾನ ತರಿಸಿ ಆಧುನಿಕ ಟಚ್ ನೀಡಿ ಉತ್ತಮ ವ್ಯವಸ್ಥೆಯನ್ನು ಮಾಡುವ ಕುರಿತು ಚರ್ಚೆಗಳು ನಡೆಯಿತು. ಆದರೆ ಇದೀಗ ಅದರ ಆರ್‌ಟಿಸಿ ಪತ್ರವೇ ಇಲ್ಲ ಎಂದು ಹೇಳುತ್ತಿದ್ದೀರಿ. ಇದರ ಅರ್ಥ ಏನು ಎಂದು ಅವರು ಕೇಳಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಳೆದ ಒಂದು ಪಂಚಾಯತಿ ಸಭೆಯಲ್ಲಿ ಪಶು ವೈದ್ಯಾಧಿಕಾರಿಗಳ ತಂಡವನ್ನು ಕರೆಸಿ ಸಭೆ ನಡೆಸಿ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಕೈಗೊಳ್ಳುವ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು.ಆದರೆ ಆ ಯೋಜನೆ ಆ ಸಭೆಯಲ್ಲಿ ಮುಗಿದು ಹೋಗಿದೆ ಎಂದು ನಾಮ ನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೋರವರು ಹೇಳಿದರು.ಇದಕ್ಕೆ ಪೂರಕವಾಗಿ ಸದಸ್ಯರಾದ ಬಾಲಕೃಷ್ಣ ರೈ ಅವರು ಮಾತನಾಡಿ ನಮ್ಮ ದುಗಲಡ್ಕ ಪರಿಸರದಲ್ಲಿಯೂ ಕೂಡ ನಾಯಿಗಳು ಏಳು ಎಂಟು ಮರಿಗಳನ್ನು ಹಾಕಿ ರಸ್ತೆಯಲ್ಲಿ ಅಡ್ಡಾದಿಡ್ಡಿ ತಿರುಗಾಡುತ್ತಿದೆ. ರಸ್ತೆಯಲ್ಲಿ ಮಕ್ಕಳಿಗೆ ವಯೋವೃದ್ಧರಿಗೆ ನಡೆದಾಡಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಸದಸ್ಯರಾದ ಬಾಲಕೃಷ್ಣ ಭಟ್ ಕೊಡಂಕೇರಿಯವರು ಮಾತನಾಡಿ, ಕಳೆದ ನಾಲ್ಕೈದು ಸಭೆಗಳಿಂದ ಜಯನಗರ ರುದ್ರ ಭೂಮಿಯ ಬಗ್ಗೆ ಸಮಿತಿ ರಚಿಸಲು ಮತ್ತು ನಮ್ಮ ವಾರ್ಡಿನಲ್ಲಿರುವ ಕೆಲವು ಅಪಾಯಕಾರಿ ಮರಗಳ ತೆರವು ಕಾರ್ಯ ನಡೆಸುವ ಬಗ್ಗೆ ಮಾತನಾಡುತ್ತಾ ಬರುತ್ತಿದ್ದೇವೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.

ಪಂಚಾಯತ್ ಆರೋಗ್ಯಧಿಕಾರಿ ಸಭೆಗೆ ಬಾರದೇ ಇರುವ ಕುರಿತು ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು ಈ ಸಭೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಆರೋಗ್ಯ ಅಧಿಕಾರಿಯನ್ನು ಬದಲಾಯಿಸುವ ಬಗ್ಗೆ ಕೇಳಿಕೊಳ್ಳುವ ಕುರಿತು ನಿರ್ಣಯವನ್ನು ತೆಗೆದುಕೊಳ್ಳುವ ಬಗ್ಗೆ ಹೇಳಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರ ಸರ್ವಾನುಮತದಿಂದ ನಿರ್ಣಯವನ್ನು ಕೈಗೊಳ್ಳಲು ತೀರ್ಮಾನ ಕೈಗೊಂಡರು.

ಬೀರಮಂಗಲ ಪಾರ್ಕಿಗೆ ಸರದಾರ ವಲ್ಲಭಾಯಿ ಪಟೇಲ್‌ರವರ ಹೆಸರನ್ನು ಇಡುವ ಬಗ್ಗೆ ಚರ್ಚೆ ಬಂದಾಗ ಸ್ಥಳೀಯ ಸದಸ್ಯರಾದ ಧೀರಾ ಕ್ರಾಸ್ತರವರು ಪಾರ್ಕಿಗೆ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾರವರ ಹೆಸರು ಇಡುವಂತೆ ಕೇಳಿಕೊಂಡರು.

ಅಲ್ಲದೆ ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲುಗಳು ತುಂಬಿರುವ ಬಗ್ಗೆ ಮತ್ತು ಇದರಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಶರೀಫ್ ಕಂಠಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ರವರು ಸಭೆಯಲ್ಲಿ ಮತ್ತೊಮ್ಮೆ ಉಲ್ಲೇಖ ಮಾಡಿದರು.

ಇದಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಹೇಳಿಕೊಂಡಾಗ ಇಂಜಿನಿಯರ್ಗಳು,ಅಧಿಕಾರಿಗಳು ಬಂದು ಸರಿಪಡಿಸಿ ಕೊಡುವ ಬಗ್ಗೆ ಭರವಸೆಯನ್ನು ನೀಡಿ ಹೋಗುತ್ತಾರೆ. ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಅಲ್ಲಿಯ ಪರಿಸ್ಥಿತಿ ಇರುತ್ತದೆ. ಇದೀಗ ಜನರು ನಮ್ಮನ್ನು ಬಯ್ಯುತ್ತಿದ್ದಾರೆ. ಅಲ್ಲಿ ಬಂದು ನಿಂತು ಫೋಟೋ ತೆಗೆಸಿಕೊಳ್ಳಲು ಮಾತ್ರ ನೀವು ಬರುವುದಾ ಎಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ನಾವು ಏನು ಉತ್ತರ ಹೇಳಬೇಕೆಂದು ಶರೀಫ್ ಕಂಠಿಯವರು ಕೇಳಿದರು.

ಅಲ್ಲದೆ ನಗರದ ಬೀದಿ ದೀಪ, ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ರ್‍ಯಾಕ್ ಒದಗಿಸುವ ಹಾಗೂ ಇತರ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.

ಮುಖ್ಯ ಅಧಿಕಾರಿ ಬಸವರಾಜ್ ಸ್ವಾಗತಿಸಿ ವಂದಿಸಿದರು.