ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ದಿನೇ ದಿನೇ ತೀವ್ರಗೊಳ್ಳುತ್ತಿರುವ ಕಾಡಾನೆ ಸಮಸ್ಯೆಯ ಕುರಿತು ವಿಸ್ತೃತವಾಗಿ ಚರ್ಚಿಸಿದರು. ಈ ಮೂರು ತಾಲೂಕುಗಳ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿಭೂಮಿಗೆ ನುಗ್ಗಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ಪ್ರಮುಖ ಬೆಳೆಗಳನ್ನು ನಾಶಪಡಿಸುತ್ತಿದ್ದು, ಇದರಿಂದ ಕೃಷಿಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅಲ್ಲದೆ, ಕಾಡಾನೆ ದಾಳಿಯಿಂದ ಕೆಲವೆಡೆ ಮಾನವ ಜೀವಹಾನಿ ಹಾಗೂ ಗಂಭೀರ ಗಾಯಗಳ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬುದನ್ನು ಶಾಸಕರು ಸಚಿವರ ಗಮನಕ್ಕೆ ತಂದರು.
ಹಿನ್ನೆಲೆಯಲ್ಲಿ, ಕಾಡಾನೆ ದಾಳಿ ತಡೆಯಲು ಮತ್ತು ಕೃಷಿಕರ ಜೀವ–ಆಸ್ತಿಗೆ ರಕ್ಷಣೆ ನೀಡಲು ಜಿಲ್ಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಅನ್ನು ತಕ್ಷಣವೇ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕರು ಒತ್ತಾಯಿಸಿದರು. ಈ ಹಿಂದೆ ಸದನದಲ್ಲಿಯೇ ಸಚಿವರು ETF ರಚನೆ ಕುರಿತು ಭರವಸೆ ನೀಡಿದ್ದನ್ನು ನೆನಪಿಸಿದ ಶಾಸಕರು, ಅದನ್ನು ಕಾಗದದ ಭರವಸೆಯಲ್ಲೇ ಉಳಿಸದೆ ಕಾರ್ಯರೂಪಕ್ಕೆ ತರುವಂತೆ ಮನವಿ ಸಲ್ಲಿಸಿದರು. ETF ಸ್ಥಾಪನೆಯಿಂದ ಕಾಡಾನೆಗಳ ಚಲನವಲನವನ್ನು ನಿಯಂತ್ರಿಸಿ, ತಕ್ಷಣ ಸ್ಪಂದಿಸುವ ವ್ಯವಸ್ಥೆ ರೂಪಿಸಬಹುದಾಗಿದ್ದು, ಇದರಿಂದ ಕೃಷಿ ಹಾನಿ ಮತ್ತು ಮಾನವ ಜೀವಹಾನಿಯನ್ನು ಬಹುಮಟ್ಟಿಗೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಕಾಡಂಚಿನ ಗ್ರಾಮಗಳಲ್ಲಿ ಬದುಕುತ್ತಿರುವ ಕೃಷಿಕರು ನಿರಂತರ ಭಯದಲ್ಲಿರುವುದು ಅತ್ಯಂತ ವಿಷಾದನೀಯವಾಗಿದ್ದು, ಸರ್ಕಾರದ ಜವಾಬ್ದಾರಿಯುತ ಹಸ್ತಕ್ಷೇಪದಿಂದ ಮಾತ್ರ ಅವರ ಬದುಕಿಗೆ ಭದ್ರತೆ ಒದಗಿಸಲು ಸಾಧ್ಯವೆಂದು ಹೇಳಿದರು. ETF ಸ್ಥಾಪನೆಯ ಮೂಲಕ ಕಾಡಾನೆ ದಾಳಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.









ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಮುಂದಿನ ವಾರದಲ್ಲೇ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಕಾರ್ಯಾರಂಭಗೊಳ್ಳಲಿದೆ ಎಂದು ಸ್ಪಷ್ಟವಾಗಿ ಭರವಸೆ ನೀಡಿದರು. ಜೊತೆಗೆ, ಅಧಿವೇಶನದ ನಂತರ ಸ್ವತಃ ಸುಳ್ಯ ತಾಲೂಕಿಗೆ ಭೇಟಿ ನೀಡುವ ಯೋಜನೆಯಿದ್ದು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಕಾಡಂಚಿನ ಗ್ರಾಮಗಳ ಕೃಷಿಕರೊಂದಿಗೆ ಒಂದೇ ವೇದಿಕೆಯಲ್ಲಿ ಕೂತು ಆನೆ ನಿಗ್ರಹಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ರೂಪಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಕಾಡಾನೆಗಳ ಚಲನವಲನ, ಹಾಟ್ಸ್ಪಾಟ್ ಪ್ರದೇಶಗಳು, ತುರ್ತು ಸ್ಪಂದನಾ ವ್ಯವಸ್ಥೆ, ಬೇಲಿ–ತಡೆಗೋಡೆ, ಬೆಳಕು ವ್ಯವಸ್ಥೆ ಹಾಗೂ ತಂತ್ರಜ್ಞಾನ ಆಧಾರಿತ ನಿಗಾವ್ಯವಸ್ಥೆ ಸೇರಿದಂತೆ ಎಲ್ಲ ಆಯಾಮಗಳನ್ನು ಒಳಗೊಂಡಂತೆ ಪರಿಣಾಮಕಾರಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸವರು ಹೇಳಿದರು. ಈ ಮೂಲಕ ಕಾಡಂಚಿನ ಗ್ರಾಮಗಳಲ್ಲಿ ಬದುಕುತ್ತಿರುವ ಕೃಷಿಕರ ಜೀವ–ಆಸ್ತಿಗೆ ಭದ್ರತೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದರು.










