ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ 51ನೇ ವಾರ್ಷಿಕೋತ್ಸವ – ನಿಶೀಪೂರ್ಣ ಭಜನೆ, ಸನ್ಮಾನ

0

ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕಲ್ಲಗದ್ದೆ, ಕೊಡಿಯಾಲ ಇದರ 51ನೇ ವಾರ್ಷಿಕೋತ್ಸವ, ನಿಶೀಪೂರ್ಣ ಭಜನೆ ಮತ್ತು ಸನ್ಮಾನ ಕಾರ್ಯಕ್ರಮ ಮಾ. 14, 15ರಂದು ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಜ. 26ರಂದು 48 ದಿನಗಳ ಭಜನಾ ಕಾರ್ಯಕ್ರಮ ಉದ್ಘಾಟನೆಗೊಂಡು, ಸುಳ್ಯ, ಪುತ್ತೂರು, ಕಡಬ ತಾಲೂಕು ಸೇರಿದಂತೆ ಊರ ಪರವೂರ ಭಜನಾ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯುತ್ತಾ ಬಂದು ಮಾ. 14ರಂದು ನಿಶೀಪೂರ್ಣ ಭಜನೆಯೊಂದಿಗೆ ಮಾ. 15ರಂದು ಬೆಳಿಗ್ಗೆ ಸಮಾಪನಗೊಳ್ಳಲಿದೆ.

ಮಾ.‌14ರಂದು ಸಂಜೆ ಕರ್ನಾಟಕ ಕೊಂಕಣಿ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಬಾಚೋಡಿ ದೇವದಾಸ್ ಪೈ ಮಂಗಳೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಮಾದೋಡಿ ಜಯಸೂರ್ಯ ರೈ ಉದ್ಘಾಟಿಸಿ ಶುಭ ಹಾರೈಸಿದರು.

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಸಂಚಾಲಕರಾದ ಎಂ.ಪಿ. ಉಮೇಶ್, ಖ್ಯಾತ ಗಾಯಕ ಶಶಿಧರ್ ಕೋಟೆ, ಪಾಕಶಾಸ್ತ್ರಜ್ಞ ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ, ಪ್ರದೀಪ್ ಕುಮಾರ್ ರೈ ಪನ್ನೆ, ನಿವೃತ್ತ ಅರಣ್ಯಾಧಿಕಾರಿ ಕುಶಾಲಪ್ಪ ಗೌಡ ಕಲ್ಪಡ, ಮಾಳ ಸಂಜೀವ ಕಾಣಿಯೂರು ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆನಂದ ಬಿ.ಸಿ. ಪ್ರಾರ್ಥಿಸಿದರು. ಭಜನಾ ಮಂಡಳಿ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಹರೀಶ್ ಕಲ್ಪಣೆ ವಂದಿಸಿದರು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ದಾಮೋದರ ಪೊಟ್ರೆ, ಖಜಾಂಜಿ ಭಾಸ್ಕರ ಗೌಡ ಹಡೀಲು, ಸದಸ್ಯರಾದ ಶ್ರೀಕಾಂತ್ ನಿಡ್ಮಾರು, ರುಕ್ಮಯ್ಯ ಗೌಡ, ರವಿಚಂದ್ರ ಮತ್ತು ಉಮೇಶ್ ಶಾಂತಿಗುಡ್ಡೆ ಸನ್ಮಾನ ಪತ್ರ ವಾಚಿಸಿದರು.


ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಮಾ. 15ರಂದು ಬೆಳಿಗ್ಗೆ 6.30ಕ್ಕೆ ಭಜನಾ ಮಂಗಳೋತ್ಸವ, ಪ್ರಸಾದ ವಿತರಣೆ, ಉಪಹಾರ ನಡೆಯಲಿದೆ. ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇವಸ್ಥಾನಗಳಲ್ಲಿ ರಾಜಕೀಯ ಸಲ್ಲದು.‌ ಹಿಂದುಗಳು ನಾವೆಲ್ಲಾ ಒಂದು. ದೇವರಿಗೆ ಯಾವುದೇ ಜಾತಿ ಬೇಧ ಇಲ್ಲ. ನಾವೆಲ್ಲಾ ಧರ್ಮವನ್ನು ಉಳಿಸುವ. ಕೊಡಿಯಾಲ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರು ಭಜನೆಯ ಮೂಲಕ ಎಲ್ಲರನ್ನೂ ಒಟ್ಟುಗೂಡಿಸುವ ಕಾರ್ಯವನ್ನು ಮಂಡಳಿಯ ಅಧ್ಯಕ್ಷ ವೆಂಕಟೇಶ ಪೈಯವರು ಮಾಡಿದ್ದಾರೆ. ಇದು ನಿರಂತರವಾಗಿ ನಡೆದುಬರಲಿ – ಜಯಸೂರ್ಯ ರೈ