ಮೇ.1 ರಿಂದ ಒಂದು ತಿಂಗಳ ಕಾಲ ನಾಗಪಟ್ಣ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ

0

ಅಜ್ಜಾವರ- ಮೇದಿನಡ್ಕ ಮಾರ್ಗವಾಗಿ ಸಂಚರಿಸಲು ಸೂಚನೆ

ಸುಳ್ಯದಿಂದ ಆಲೆಟ್ಟಿ ಕಡೆಗೆ ಹೋಗುವ ರಸ್ತೆಯಲ್ಲಿರುವ ನಾಗಪಟ್ಟಣ ಸೇತುವೆಯ ದುರಸ್ತಿ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೇ.1 ರಿಂದ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗುವುದು. ಮೇ. 30 ರ ವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಸುಳ್ಯದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಗೋಪಾಲ್ ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ.0.80 ರಲ್ಲಿ ನಾಗಪಟ್ಣ ಎಂಬಲ್ಲಿರುವ ಸೇತುವೆಯು ಶಿಥಿಲಗೊಂಡಿದ್ದು , ಅದರ ಬೇರಿಂಗ್ ದುರ್ಬಲಗೊಂಡಿದೆ. ಆ ಬೇರಿಂಗ್ ಗಳನ್ನು ಹೊಸದಾಗಿ ಹಾಕಬೇಕಾಗುತ್ತದೆ. ಸೇತುವೆಯ ಎಕ್ಸ್‌ಪಾನ್ಶನ್ ಜಾಯಿಂಟ್‌ಗಳನ್ನು ದುರಸ್ತಿಪಡಿಸಬೇಕಾಗಿರುತ್ತದೆ. ದುರಸ್ತಿ ಸಮಯದಲ್ಲಿ ಸೇತುವೆ ಮೇಲೆ ವಾಹನ ಸಂಚಾರ ನಡೆಯುತ್ತಿದ್ದರೆ ದುರಸ್ತಿ ಅಸಾಧ್ಯವಾಗಿರುವುದರಿಂದ ಈ ಸೇತುವೆಯಲ್ಲಿ ಎ.15 ರಿಂದ ಮೇ.31ರ ತನಕ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
” ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಎ.15 ರಿಂದ 31ರ ತನಕ ನಾಗಪಟ್ಣ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಆದರೆ ಸೇತುವೆಯ ಬೇರಿಂಗ್ ಮತ್ತಿತರ ಉಪಕರಣಗಳಿಗೆ ಆರ್ಡರ್ ನೀಡಿದ್ದು ಅದು ಬಂದು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಕಾಮಗಾರಿ ಆರಂಭಿಸಲು ಇನ್ನೂ ಕೆಲವು ದಿನಗಳು ತೆಗೆದುಕೊಳ್ಳಬಹುದು. ಆದುದರಿಂದ ಮೇ.1 ರಿಂದ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗುತ್ತದೆ” ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಗೋಪಾಲ್ ಅವರು ‘ಸುದ್ದಿ’ ಗೆ ಮಾಹಿತಿ ನೀಡಿದ್ದಾರೆ.

ಬದಲಿ ಮಾರ್ಗ ಸೂಚನೆ:
ಸೇತುವೆಯ ದುರಸ್ತಿ ಸಮಯದಲ್ಲಿ ಸುಳ್ಯದಿಂದ ಅಲೆಟ್ಟಿ- ಬಡ್ಡಡ್ಕ- ಕೂರ್ನಡ್ಕ – ಬಡ್ಡಡ್ಕ – ಕಲ್ಲಪಳ್ಳಿ- ಪಾಣತ್ತೂರು ಮತ್ತು ಸುಳ್ಯದಿಂದ ನಾರ್ಕೋಡು-ಕೋಲ್ಚಾರು- ಕಣಕ್ಕೂರು-ಬಂದಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ- ಕಾಂತಮಂಗಲ-ಅಜ್ಞಾವರ-ಮೇದಿನಡ್ಕ- ನಾರ್ಕೋಡು ಮತ್ತು ಸುಳ್ಯ-ಕಾಂತಮಂಗಲ- ಅಜ್ಞಾವರ-ಮಂಡೆಕೋಲು- ಕನ್ಯಾನ ಮಾರ್ಗವಾಗಿ ಕೇರಳ ಗ್ರಾಮೀಣ ರಸ್ತೆ ಮೂಲಕ ಸಂಚರಿಸಲು ಆದೇಶ ಹೊರಡಿಸಲಾಗಿದೆ.
ಈ ಆದೇಶದನ್ವಯ ಈ ರಸ್ತೆಯಲ್ಲಿ ಅವಶ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸೂಚಿಸಲಾಗಿದೆ.