ಜಾಲ್ಸೂರಿನ ಮಾವಿನಕಟ್ಟೆಯಲ್ಲಿ ಜಿ.ಒ.ಎಸ್. ಗೆ ಬೀಗ ಜಡಿದ ಮೆಸ್ಕಾಂ

0

ಜಾಲ್ಸೂರು, ಕನಕಮಜಲು ಜನರಿಗೆ ವಿದ್ಯುತ್ ಕಡಿತ : ಬೀಗ ತೆರವಿಗೆ ಜನರ ಒತ್ತಾಯ

ಜಾಲ್ಸೂರು ಗ್ರಾಮದ ಅಡ್ಕಾರು – ವಿನೋಬನಗರ ಬಳಿಯ ಮಾವಿನಕಟ್ಟೆ ಎಂಬಲ್ಲಿ ಜಿ.ಒ.ಎಸ್.ಗೆ ಮೆಸ್ಕಾಂ ಬೀಗ ಜಡಿದಿರುವುದರಿಂದ ಜಾಲ್ಸೂರು ಹಾಗೂ ಕನಕಮಜಲು ಭಾಗದ ಜನರಿಗೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಕನಕಮಜಲು, ಜಾಲ್ಸೂರು ಗ್ರಾಮ ವ್ಯಾಪ್ತಿಗೆ ಪುತ್ತೂರು ಭಾಗದಿಂದ ವಿದ್ಯುತ್ ಸರಬರಾಜಾಗುವ ಲೈನ್‌ನಲ್ಲಿ ಫಾಲ್ಟ್ ಉಂಟಾದರೆ, ಸುಳ್ಯ ಭಾಗದಿಂದ ವಿದ್ಯುತ್ ನೀಡಲು ಸಾಧ್ಯವಾಗುತ್ತದೆ. ಲೈನ್ ಬದಲಾಯಿಸಿ ವಿದ್ಯುತ್ ನೀಡುವಂತ ಜಿ.ಒ.ಎಸ್. ಅನ್ನು ಮಾವಿನಕಟ್ಟೆಯಲ್ಲಿ ಹಾಕಲಾಗಿದೆ. ಜು.೪ರಂದು ಮಧ್ಯಾಹ್ನದಿಂದ ಕನಕಮಜಲು ಭಾಗ ವಿದ್ಯುತ್ ಲೈನ್‌ನಲ್ಲಿ ಫಾಲ್ಟ್ ಉಂಟಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಆ ಸಂದರ್ಭ ಸುಳ್ಯದಿಂದ ವಿದ್ಯುತ್ ಸರಬರಾಜು ಮಾಡಲು ಅವಕಾಶ ಇರುತ್ತದೆ. ಇಲ್ಲಿಂದ ವಿದ್ಯುತ್ ಸರಬರಾಜು ಮಾಡಿದರೆ ಸುಳ್ಯ ಭಾಗಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸುಳ್ಯ ಮೆಸ್ಕಾಂ ಶಾಖೆಯವರು ಮಾವಿನಕಟ್ಟೆಯಲ್ಲಿರುವ ಜಿ.ಒ.ಎಸ್.ಗೆ ಬೀಗ ಜಡಿದು ಜಾಲ್ಸೂರು, ಕನಕಮಜಲು ಭಾಗಕ್ಕೆ ವಿದ್ಯುತ್ ಸರಬರಾಜು ಆಗದಂತೆ ಮಾಡಿದರೆಂದು ತಿಳಿದು ಬಂದಿದೆ.
ಇದೀಗ ಜಾಲ್ಸೂರು, ಕನಕಮಜಲು ಗ್ರಾಮದ ಜನರು ಆಕ್ರೋಶಗೊಂಡಿದ್ದು ಬೀಗ ತೆರವು ಮಾಡಿ, ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇದೀಗ ಮಾವಿನಕಟ್ಟೆ ಜಿ.ಒ.ಎಸ್. ಬಳಿ ಜನರು ಸೇರಿ, ಪ್ರತಿಭಟಿಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.