ಅಪಾಯವನ್ನು ಆಹ್ವಾನಿಸುತ್ತಿರುವ ಶೇಣಿ – ಕೋರತ್ಯಡ್ಕ ರಸ್ತೆಗೆ ಮುಕ್ತಿಯೆಂದು?

0

ಅಯ್ಯನಕಟ್ಟೆ – ಬೇಂಗಮಲೆ ಮುಖ್ಯರಸ್ತೆಯಲ್ಲಿ ಅಯ್ಯನಕಟ್ಟೆಯಿಂದ ಕೊರತ್ಯಡ್ಕದ ತನಕ ರಸ್ತೆ ಪೂರ್ಣ ಕೆಟ್ಟು ಹೋಗಿದ್ದು, ಶೇಣಿಯಿಂದ ಕೊರತ್ಯಡ್ಕದ ತನಕ ಸಂಚರಿಸುವುದೇ ದುಸ್ತರವಾಗಿದೆ. ಅಯ್ಯನಕಟ್ಟೆಯಿಂದ ಶೇಣಿಯವರೆ ರಸ್ತೆ ಅಗಲೀಕರಣಗೊಂಡಿದ್ದರೂ ನೂರಾರು ಹೊಂಡಗುಂಡಿಗಳಿವೆ. ಶೇಣಿಯಿಂದ ಕೊರತ್ಯಡ್ಕದ ತನಕ ಸಿಂಗಲ್ ರೋಡ್ ಇರುವುದರಿಂದ ಎರಡೂ ಬದಿಗಳಲ್ಲಿ ನೀರು ಸರಬರಾಜು ಪೈಪ್ ಮತ್ತು ಮೆಸ್ಕಾಂನವರ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿರುವುದರೀಂದ ರಸ್ತೆಯ ಗಾತ್ರ ಮತ್ತೂ ಕಿರಿದಾಗಿದೆ. ರಸ್ತೆಯುದ್ದಕ್ಕೂ ಹೊಂಡಗುಂಡಿಗಳೇ ತುಂಬಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸವಾಗಿದೆ. ಪ್ರತಿ ದಿನ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ತೆರಳುವ ನೂರಾರು ಮಂದಿ ಸಂಚರಿಸುವುದರೊಂದಿಗೆ ನಿಂತಿಕಲ್ಲು- ಬಾಳಿಲ ಭಾಗದಿಂದ ಸುಳ್ಯಕ್ಕೆ ತೆರಳುವವರೂ ಇದೇ ರಸ್ತೆಯನು ಬಳಕೆ ಮಾಡುತ್ತಾರೆ. ಕೆಲವು ಕಡೆಗಳಲ್ಲಿ ರಸ್ತೆಯಲ್ಲೇ ಕೆರೆಯಿರುವುದೇನೋ ಎಂಬಂತೆ ಭಾಸವಾಗುತ್ತದೆ. ಈ ಲೋಕೋಪಯೋಗಿ ರಸ್ತೆಗೆ ಜನಪ್ರತಿನಿಧಿಗಳು ಅನುದಾನವನ್ನಿರಿಸಿ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಪಡಿಸಬೇಕೆಂಬುದು ಈ ರಸ್ತೆಯ ಫಲಾನುಭವಿಗಳ ಆಗ್ರಹ.

ಕಳೆದ ಕೆಲವು ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸದೇ ಇರುವುದರೀಂದ ರಸ್ತೆ ಇಷ್ಟೊಂದು ಕೆಟ್ಟು ಹೋಗಿದೆ. ದಿನಪ್ರತಿ ಈ ರಸ್ತೆಯಲ್ಲಿ ನೂರಾರು ಮಂದಿ ಸಂಚರಿಸುವುದರಿಂದ ಜನಪ್ರತಿನಿಧಿಗಳು ರಸ್ತೆಯ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ – ಜಯರಾಮ ಸುವಿದ

ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಕಾರು ಮತ್ತು ದೊಡ್ಡ ವಾಹನದವರು‌ ಹೊಂಡ ತಪ್ಪಿಸಲು ಕಸರತ್ತು ಮಾಡಿಕೊಂಡು ಬರುವಾಗ ನಮ್ಮ ಮೇಲೆಯೇ ಬಂದ ಹಾಗೆ ಬರುತ್ತಾರೆ. ವಾಹನಗಳು ಹೊಂಡಕ್ಕೆ ಇಳಿಯುವಾಗ ಮತ್ತು ಕೆಲವು ಕಡೆ ನೀರು ನಿಂತು ಹೊಂಡ ಎಷ್ಟು ಆಳ ಇದೆ ಎಂದು ತಿಳಿಯದೆ ಹೊಂಡಕ್ಕೆ ಬಿದ್ದು ಕೆಸರು ನೀರಿನ ಅಭಿಷೇಕವೂ ನಡೆಯುತ್ತದೆ – ಪವಿತ್ರ

10 ಕೋಟಿಯ ಪ್ರಪೋಸಲ್ ಕಳಿಸಿದ್ದೇನೆ – ಶಾಸಕಿ ಭಾಗೀರಥಿ ಮುರುಳ್ಯ

ಅಯ್ಯನಕಟ್ಟೆ – ಬೇಂಗಮಲೆ ರಸ್ತೆಯ ದುರವಸ್ಥೆ ಗೊತ್ತಿದೆ. ಈ ರಸ್ತೆಯ ಅಭಿವೃದ್ಧಿಗೆ ರೂ. 10 ಕೋಟಿಯ ಪ್ರಪೋಸಲ್ ಕಳ್ಸಿದ್ದೇನೆ. ಈಗ ಮಳೆಗಾಲವಾಗಿರುವುದರಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.