ನಾವು ಬಿಜೆಪಿ ಕೃಪಾಪೋಷಿತರಲ್ಲ – ಭಕ್ತರು

0

ಪಕ್ಷಕ್ಕೆ ಸೀಮಿತಗೊಳಿಸಿ ಬಿಂಬಿಸಿರುವುದು ನೋವು ತಂದಿದೆ

ಪಂಜ ದೇವಸ್ಥಾನ ಘಟನೆಯ ಬಗ್ಗೆ ಕಾಂಗ್ರೆಸ್ ಟೀಕೆಗೆ ಭಕ್ತ ಮುಖಂಡರ ಮರುತ್ತರ

‘ ಪಂಜ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ಲೆಕ್ಕ ಸರಿಯಾಗಿ ನೀಡುತ್ತಿಲ್ಲವೆಂದು ಸಭೆಯಲ್ಲಿ ಅಪಪ್ರಚಾರ ನಡೆಸಿದವರು ಬಿ.ಜೆ.ಪಿ. ಕೃಪಾಪೋಷಿತರು’ ಎಂದು ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ಕರೆದು ನೀಡಿದ್ದ ಹೇಳಿಕೆಗೆ ಉತ್ತರ ನೀಡಿರುವ ಪಂಜದ ದೇವಸ್ಥಾನ ಹಿತರಕ್ಷಣಾ ವೇದಿಕೆಯ ಭಕ್ತ ಪ್ರಮುಖರು “ನಾವು ಬಿಜೆಪಿ ಕೃಪಾಪೋಷಿತರಲ್ಲ. ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಮಗೆ ಖುಷಿ ಬಂದಂತೆ ಆಡಳಿತ ನಡೆಸುತ್ತಿರುವುದನ್ನೂ, ಸರಿಯಾದ ಲೆಕ್ಕಪತ್ರ ಕೊಡದಿರುವುದನ್ನೂ ಪ್ರಶ್ನೆ ಮಾಡಿದ ಕಾರಣಕ್ಕಾಗಿ ನಮ್ಮನ್ನು ಬಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಿ ಕಾಂಗ್ರೆಸ್ ಮುಖಂಡರು ಪ್ರಚಾರ ಮಾಡುತ್ತಿರುವುದು ಖಂಡನೀಯ” ಎಂದು ಮರುತ್ತರ ನೀಡಿದ್ದಾರೆ.

ಕಾಂಗ್ರೆಸ್ ಹೇಳಿಕೆಗೆ ಉತ್ತರ ನೀಡಲು ಸೆ. 26 ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಶಂಕರ ಕುಮಾರ್, ಪ್ರಕಾಶ್ ಜಾಕೆ, ಚಂದ್ರಶೇಖರ ಶಾಸ್ತ್ರಿ, ನಾರಾಯಣ ಕೃಷ್ಣನಗರ, ಅಂಕುಶ್ ಕುದ್ವ ಮತ್ತು ಶರತ್ ಕುದ್ವರವರು ಪಂಜ ದೇವಸ್ಥಾನದ ಸಲಹಾ ಸಮಿತಿ ಸದಸ್ಯರಾದ ಕಾಂಗ್ರೆಸ್ ಮುಖಂಡ ಮಹೇಶ್‌ಕುಮಾರ್ ಕರಿಕ್ಕಳ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರನ್ನು ಪತ್ರಿಕಾಗೋಷ್ಠಿಯಲ್ಲಿ ತೀವ್ರವಾಗಿ ತರಾಟೆಗೆತ್ತಿಕೊಂಡರು. ದೇವಿಪ್ರಸಾದ್ ಕಾನತ್ತೂರುರವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರಲು ಅರ್ಹರೇ ಅಲ್ಲ ಎಂದು ಹೇಳಿದರು.
” ದೇವಸ್ಥಾನದಲ್ಲಿ ಆಗುತ್ತಿರುವ ಗೊಂದಲಗಳ ವಿಚಾರವಾಗಿ ಮತ್ತು ಲೆಕ್ಕಪತ್ರಗಳ ಬಗ್ಗೆ ತಿಳಿದುಕೊಳ್ಳುವ ಉದ್ಧೇಶದಿಂದ ಭಕ್ತರಾದ ನಾವು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರ್‌ರಿಗೆ ಮನವಿ ನೀಡಿ ಭಕ್ತರ ಸಭೆ ಕರೆಯಲು ಕೇಳಿಕೊಂಡಾಗ ಅವರಾಗಿಯೇ ಆ.15 ರಂದು ಸಭೆ ಕರೆಯುತ್ತೇನೆ ಎಂದರು. ಅವರೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಾಕಿ ನಮ್ಮನ್ನು ಸಭೆಗೆ ಕರೆದ ಮೇರೆಗೆ ಭಕ್ತರು ಸಾವಿರ ಸಂಖ್ಯೆಯಲ್ಲಿ ಸಭೆಗೆ ಹೋಗಿದ್ದೇವೆ. ಸಭೆಯಲ್ಲಿ ಅವರು ನೀಡಿದ ಲೆಕ್ಕಪತ್ರ ಸರಿಯಾಗಿ ಕಂಡುಬರದೇ ಇದ್ದುದರಿಂದ ಅವರ ರಾಜೀನಾಮೆಗೆ ಒತ್ತಾಯಿಸಿದ್ದೇವೆ. ಆದರೆ ಅವ್ಯವಹಾರ ನಡೆದಿದೆ ಎಂದು ನಾವು ಆರೋಪ ಮಾಡಿರಲಿಲ್ಲ. ಆದರೆ ಭಕ್ತರ ಈ ಆಗ್ರಹವನ್ನು ರಾಜಕೀಯಗೊಳಿಸಿ, ದೇವಸ್ಥಾನಕ್ಕೆ ಪಕ್ಷ ರಾಜಕೀಯದ ಲೇಪನ ಹಚ್ಚಿರುವ ಮಹೇಶರು ಮತ್ತು ಬೊಳ್ಳೂರುರವರ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬಳಿಕ ನಾವು ದೇವರ ಸಾನಿಧ್ಯ ವೃದ್ಧಿಗಾಗಿ ದೇವಳದಲ್ಲಿ ನಿರಂತರ 12 ದಿನಗಳ ಕಾಲ ಶಿವಪಂಚಾಕ್ಷರಿ ಜಪವನ್ನು ಪಠಿಸಿ ಕೊನೆಯ ದಿನ 5000 ಸೀಯಾಳಾಭಿಷೇಕ ಮಾಡಿದ್ದೇವೆ” ಎಂದು ಅವರು ಹೇಳಿದರು. ನಾವು ಬಿ.ಜೆ.ಪಿ. ಕೃಪಾಪೋಷಿತರೆಂದು ಇವರು ಹೆರಳುವುದಿದ್ದರೆ, ಇವರದೇ ಪಕ್ಷದ ಮುಖಂಡರಾದ ದಿನೇಶ್ ಪುಂಡಿಮನೆ, ಲೋಕನಾಥ ಕುಚ್ ಮತ್ತು ಇನ್ನೊಬ್ಬರು ಭಕ್ತರು ಎತ್ತಿರುವ ವಿಚಾರದ ಪರವಾಗಿ ಧ್ವನಿ ಎತ್ತಿ ಅವರ ಪಕ್ಚಕ್ಕೆ ರಾಜೀನಾಮೆ ಕೊಟ್ಟದ್ದೇಕೆ ?” ಎಂದು ಅವರು ಪ್ರಶ್ನಿಸಿದರು.
” 2003 ರಿಂದ 2025 ರ ವರೆಗಿನ ಎಲ್ಲಾ ಲೆಕ್ಕಪತ್ರಗಳನ್ನು ತನಿಖೆಗೊಳಪಡಿಸಲು ಲೋಕಾಯುಕ್ತಕ್ಕೆ ಬರೆಯುವುದಾಗಿ ಮಹೇಶ್ ಕರಿಕ್ಕಳರವರು ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ” ಎಂದವರು ಹೇಳಿದರು.

” ಕೊರೊನಾ ಸಮಯದಲ್ಲಿ ಕೂಡಾ ದೇವಸ್ಥಾನಕ್ಕೆ ನಷ್ಟ ಸಂಭವಿಸಿಲ್ಲ. ದೇವಿಪ್ರಸಾದ್ ಕಾನತ್ತೂರುರವರ ಆಡಂಬರದ ಆಡಳಿತದಿಂದ ನಷ್ಟವಾಗಿರುವುದು. 2020 ರಲ್ಲಿ ಇದೇ ದೇವಿಪ್ರಸಾದರು ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದಾಗ ದೇವಸ್ಥಾನದ ಸಿಬ್ಬಂದಿಗಳಿಗೆ ತಿಂಗಳಿಗೆ 1500 ರೂ.ಗಳಂತೆ ಸಂಬಳ ಏರಿಸಿದ್ದರು. ಆದಾಯ ಕಡಿಮೆ ಇದ್ದರೆ ಹೀಗೆ ಮಾಡುತ್ತಿದ್ದರೇ?” ಎಂದು ಪ್ರಕಾಶ್ ಜಾಕೆ ಪ್ರಶ್ನಿಸಿದರು.