ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಬೆಳೆ ವಿಮೆ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಸಹಕಾರಿ ಸಂಘಗಳ ಮೂಲಕ ವಿಮಾ ಕಂತು ಕಟ್ಟಿಸಲಾಗಿದೆ. ಆದರೆ ಗ್ರಾಮಗಳಲ್ಲಿ ಸರಿಯಾದ ಮಳೆ ಮಾಪನ ಅಳವಡಿಸದೆ, ಕೆಟ್ಟು ಹೋದ ಮಾಪನದ ಆಧಾರದಲ್ಲಿ ವಿಮಾ ಕಂಪನಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಸೇರಿಕೊಂಡು ಕೇಂದ್ರ ಸರ್ಕಾರದ ಹಣವನ್ನು ಕೃಷಿಕರಿಗೆ ನೀಡದೆ ವಂಚಿಸಿದೆ.














ಬೆಳೆ ನಾಶವಾಗಿರುವ ಗ್ರಾಮಗಳ ರೈತರು ತಮ್ಮ ಖಾತೆಗೆ ದೊಡ್ಡ ಮೊತ್ತ ಜಮೆಯಾಗುವ ವಿಶ್ವಾಸದಿಂದ ಕಾಯುತ್ತಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸರಾಸರಿ ಮಳೆಯ ಆಧಾರದಲ್ಲಿ ಲೆಕ್ಕ ಹಾಕಿ, ಸುಳ್ಯ ಕ್ಷೇತ್ರದಲ್ಲಿ ಅಡಿಕೆ ಕೊಳೆ ರೋಗ ಮತ್ತು ಹಳದಿ ರೋಗದಿಂದ ಕಂಗಾಲಾಗಿರುವ ರೈತರ ಬದುಕಿಗೆ ದ್ರೋಹ ಬಗೆಯಲಾಗಿದೆ.
ಅಲ್ಲದೆ ಕಡಿಮೆ ಕೃಷಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾದ ಉಳ್ಳಾಲವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ರಾಜ್ಯದ ರೈತರ ಹಣದಲ್ಲಿ ಜಿಲ್ಲೆಯಲ್ಲಿ ತಾರತಮ್ಯ ಮಾಡಿ ನೈಜ ರೈತರಿಗೆ ಅಪಮಾನ ಮಾಡಲಾಗಿದೆ. ಇದರಿಂದ ರೈತರು ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮುಂದೆ ರೈತರು ವಿಶ್ವಾಸದಿಂದ ವಿಮಾ ಕಂತು ಕಟ್ಟದಂತಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಿಸಿದೆ.
ಮಳೆ ಹೆಚ್ಚು ಬಿದ್ದ ಪ್ರದೇಶದಲ್ಲಿ ಕಡಿಮೆ ಪರಿಹಾರ ಬಿಡುಗಡೆಯಾಗಿರುವ ಸಹಕಾರಿ ಸಂಘ ವ್ಯಾಪ್ತಿಯ ರೈತರ ಖಾತೆಗೆ ಕೂಡಲೇ ಹೆಚ್ಚುವರಿ ನ್ಯಾಯಯುತ ಪರಿಹಾರವನ್ನು ಪಾವತಿಸಬೇಕು ಎಂದು ಆಗ್ರಹಿಸುತ್ತೇನೆ. ತಪ್ಪಿದಲ್ಲಿ ನೊಂದ ಗ್ರಾಮಗಳ ರೈತರ ಹಕ್ಕಿನ ಹಣವನ್ನು ಜಮೆ ಮಾಡಿಸಲು ಅವರ ಜೊತೆ ನಿಂತು ಹೋರಾಟ ಮಾಡಬೇಕಾಗುತ್ತದೆ ಎಂದು ಸುಳ್ಯ ಮತ್ತು ಕಡಬ ತಾಲೂಕು ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







