ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲು ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಆಗ್ರಹ














ಕಲ್ಮಡ್ಕ ಗ್ರಾಮದ ಹೊಳೆಕೆರೆ ಎಂಬಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಗಾಯಗೊಂಡು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸಿಂಚನ್ನ ಆರೋಗ್ಯವನ್ನು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ನೇತೃತ್ವದ ತಂಡವು ಅ. 14ರಂದು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿತು.
ಈ ಸಂದರ್ಭದಲ್ಲಿ ಘಟನೆಯ ತನಿಖೆಗಾಗಿ ಆಗಮಿಸಿದ್ದ ಮಂಗಳೂರು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಮಿತಿಯ ಮುಖಂಡರು ಮಾತುಕತೆ ನಡೆಸಿ, ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಭರತ್ ಮತ್ತು ರಮೇಶ್ ಅವರ ಕುಟುಂಬಗಳಿಗೆ ಹಾಗೂ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಮುಖಂಡರಾದ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು, ಜಯಶ್ರೀ ಕಡಬ, ಪ್ರೇಮ ಬೆದ್ರಕಾಡು, ಗಣೇಶ್ ಸೀಗೆಬಲ್ಲೆ, ಕುಶಾಲಾಕ್ಷಿ, ಲವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







