ಏನೆಕಲ್ : ನೀರಿನ ಟ್ಯಾಂಕ್ ನಿರ್ಮಿಸುತ್ತಿದ್ದ ಕಾರ್ಮಿಕರಿಗೆ ವಿದ್ಯುತ್ ಶಾಕ್ ತಗುಲಿ ಗಾಯ

0

ಗಂಭೀರ ಗಾಯಗೊಂಡ ಇಬ್ಬರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರಿಗೆ ಕರ್ತವ್ಯದ ವೇಳೆ ವಿದ್ಯುತ್ ಶಾಕ್ ತಗುಲಿ ಗಾಯಗೊಂಡ ಘಟನೆ ಏನೆಕಲ್ ನಲ್ಲಿ ಅ.25ರಂದು ಸಂಭವಿಸಿದೆ.

ಏನೆಕಲ್ ಗ್ರಾಮದ ಬಾನಡ್ಕ ಎಂಬಲ್ಲಿ ಗ್ರಾ.ಪಂ. ಕುಡಿಯುವ ನೀರು ಯೋಜನೆಯ ನೀರಿನ ಟ್ಯಾಂಕ್ ಕಾಮಗಾರಿ ಮಾಡುತ್ತಿದ್ದ ವೇಳೆ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ತಂತಿ ತಗುಲಿ ಗಂಭೀರ ಗಾಯಗೊಂಡಿದ್ದರು.
ಸುಳ್ಯದ ಕಬೀರ್ ಮತ್ತು ಅವರ ತಮ್ಮ ರಿಂಗ್ ಕೆಲಸದ ಕಾರ್ಮಿಕರೊಂದಿಗೆ ಏನೆಕಲ್ಲಿನ ಬಾನಡ್ಕದಲ್ಲಿ ನೀರಿನ ಟ್ಯಾಂಕ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಟ್ಯಾಂಕ್ ನ ಕೆಳಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ರಾಡ್ ತಗುಲಿ ಅದರ ಮೂಲಕ ವಿದ್ಯುತ್ ಪ್ರವಹಿಸಿ ರಿಂಗ್ ಕೆಲಸದ ಮೇಸ್ತ್ರಿ ಕಬೀರ್ ದುಗಲಡ್ಕ ಮತ್ತು ಓರ್ವ ಕಾರ್ಮಿಕ ಗಂಭೀರ ಗಾಯಗೊಂಡರು. ತಕ್ಷಣ ಗಾಯಾಳುಗಳನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.