ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಿರುಷಷ್ಠಿ ರಥೋತ್ಸವ, 53 ಮಂದಿಯಿಂದ ಎಡೆಸ್ನಾನ ಸೇವೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪುಷ್ಯ ಶುದ್ದ ಕಿರುಷಷ್ಠಿಯ ದಿನವಾದ ಡಿ.28 ರಂದು ರಾತ್ರಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಭಕ್ತಿ ಸಡಗರದಿಂದ ನೆರವೇರಿತು. ಸಹಸ್ರಾರು ಸಂಖ್ಯೆಯ ಭಗವದ್ಬಕ್ತರ ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಿಕೆ,ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು.


ರಥಾರೋಹಣದ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ಶ್ರೀ ದೇವರಿಗೆ ಪೂಜೆ ನೆರವೇರಿಸಿದರು.

ಕಿರುಷಷ್ಠಿ ಕಟ್ಟೆ ಪೂಜೆ:
ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನವಿತ್ತು. ಬಳಿಕ ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯನು ಸಂಗೀತ ಪ್ರೀಯನಾಗಿರುವುದರಿಂದ ರಥೋತ್ಸವದ ಬಳಿಕ ಹೊರಾಂಗಣದಲ್ಲಿ ಶ್ರೀ ದೇವರಿಗೆ ಉತ್ಸವ ನಡೆಯಿತು. ಆರಂಭದಲ್ಲಿ ಬಂಡಿ ರಥೋತ್ಸವ ಮತ್ತು ಪಾಲಕಿ ಉತ್ಸವ ನಡೆಯಿತು.

ನಂತರ ಒಳಾಂಗಣದಲ್ಲಿ ಅನೇಕ ಸಂಗೀತಮಯ ಉತ್ಸವದ ಸುತ್ತುಗಳು ನೆರವೇರಿತು. ತಮಿಳುನಾಡು, ಕೇರಳ, ಮೈಸೂರು, ಶ್ರೀ ರಂಗಪಟ್ಟಣ ಮೊದಲಾದ ಪ್ರದೇಶಗಳ ಕಲಾವಿದರಿಂದ ಸ್ಯಾಕ್ಸೋಪೋನ್, ನಾದಸ್ವರ, ತವಿಲ್, ಬ್ಯಾಂಡ್ ಮೊದಲಾದ ಸಂಗೀತ ವಾದ್ಯಗಳ ಉತ್ಸವಗಳ ಸುತ್ತುಗಳು ಭಕ್ತಾಧಿಗಳನ್ನು ಭಾವಪರವಶವಾಗುವಂತೆ ಮಾಡಿತು. ಕೇರಳ ಶೈಲಿಯ ಚೆಂಡೆ ವಾದನದ ಕೂಡಾ ನಡೆಯಿತು.


ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ವನಜಾ.ವಿ.ಭಟ್, ಲೋಕೇಶ್ ಮುಂಡುಕಜೆ, ಎಇಒ ಪುಷ್ಪಲತಾ ರಾವ್, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಡಾ.ಚಂದ್ರಶೇಖರ ನಲ್ಲೂರಾಯ, ಚಂದ್ರಶೇಖರ ಮರ್ದಾಳ, ಕಿಶೋರ್ ಕುಮಾರ್ ಕೂಜುಗೋಡು, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯ ಕುಮಾರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

53 ಮಂದಿಯಿಂದ ಎಡೆಸ್ನಾನ ಸೇವೆ
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಡಿ.28 ರ ಮಧ್ಯಾಹ್ನ ಸುಮಾರು 53 ಭಕ್ತಾದಿಗಳು ಎಡೆಸ್ನಾನ ಸೇವೆ ನೆರವೇರಿಸಿದರು.