ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, ಪ್ರಾಧಿಕಾರ ರಚನೆಗೆ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ, ಪ್ರಾಧಿಕಾರ ರಚನೆಗೆ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ರಚನೆಗೆ ನೋಟಿಫಿಕೇಶನ್ ಮಾಡುವ ವಿಚಾರ ನಿರ್ಧಾರವಾಗಬೇಕಿತ್ತು. ಆದರೆ ಸಭೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಿಚಾರ ಚರ್ಚೆಗೆ ಬಂದಾಗ ಧಾರ್ಮಿಕ ದತ್ತಿ ಸಚಿವರು ” ಸುಬ್ರಹ್ಮಣ್ಯ ಕ್ಷೇತ್ರ ರಾಜ್ಯದಲ್ಲೆ ಅತಿ ಹೆಚ್ಚು ಆದಾಯ ಬರುವ ಕ್ಷೇತ್ರವಾಗಿರುವುದರಿಂದ ಅಭಿವೃದ್ಧಿ ಪ್ರಾಧಿಕಾರ ಮಾಡುವುದು ಒಳ್ಳೆಯದು” ಎಂದು ಅಭಿಪ್ರಾಯಪಟ್ಟರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವ ಪ್ರಸ್ತಾಪವನ್ನು ಕೈಬಿಡಲು ನಿರ್ಧರಿಸಲಾಯಿತೆನ್ನಲಾಗಿದೆ.

ಅಧಿವೇಶನದಲ್ಲಿ ವಿಧೇಯಕ ಮಂಡನೆ

ಅಭಿವೃದ್ದಿ ಪ್ರಾಧಿಕಾರ ರಚನೆಯ ಬಗ್ಗೆ ಪ್ರಸ್ತಾಪ ಸಿದ್ಧಗೊಳಿಸಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಚರ್ಚಿಸಿ, ಪ್ರಾಧಿಕಾರಕ್ಕೆ ಮುಂದಿನ ಕ್ರಮ ಕೈಗೊಳ್ಳುವುದೆಂದು ತೀರ್ಮಾನಿಸಲಾಯಿತೆಂದು ತಿಳಿದುಬಂದಿದೆ.

ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿರುವವರಿಗೆ ನಿರಾಶೆ

ಧಾರ್ಮಿಕ ಪರಿಷತ್ತಿನ ಈ ನಿರ್ಧಾರದಿಂದ ಕುಕ್ಕೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷತೆ ಮತ್ತು ಸದಸ್ಯತ್ವಕ್ಕೆ ಪ್ರಯತ್ನ ನಡೆಸುತ್ತಿದ್ದವರಿಗೆ ತೀರಾ ನಿರಾಸೆಯಾಗಿದ್ದು , ಅವರು ಈ ತೀರ್ಮಾನದ ವಿರುದ್ಧ ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನ ಆರಂಭಿಸಲಿದ್ದಾರೆಂದು ಹೇಳಲಾಗುತ್ತಿದೆ.