ತೊಡಿಕಾನ : ದೇವರ ಮೀನುಗಳಿಗೆ ತೀವ್ರ ನೀರಿನ ಕೊರತೆ, ಕೃತಕವಾಗಿ ನೀರು ಚಿಮ್ಮಿಸುವಿಕೆ

0

ತೊಡಿಕಾನ ಗ್ರಾಮದಲ್ಲಿ ವಿಪರೀತ ಜಲಕ್ಷಾಮ ತಲೆದೋರಿದ್ದು ಇಲ್ಲಿಯ ಮತ್ಸ್ಯ ತೀರ್ಥ ಹೊಳೆಯಲ್ಲಿರುವ ಸಾವಿರಾರು ಸಂಖ್ಯೆಯಲ್ಲಿರುವ ದೇವರ ಮೀನುಗಳಿಗೆ ಕೃತಕವಾಗಿ ನೀರು ಹಾಯಿಸಲಾಗುತ್ತಿದೆ.

ಇಲ್ಲಿಯ ಮತ್ಸ್ಯ ತೀರ್ಥ ಹೊಳೆಯಲ್ಲಿ ಇಲ್ಲಿ ದೇವರ ಮೀನುಗಳೆಂದು ಕರೆಯುವ ಮಹಷೀರ್ ಜಾತಿಯ ಮೀನುಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಈ ವರ್ಷ ತಾಪಮಾನ ಏರಿಕೆಯ ಹಿನ್ನಲೆಯಲ್ಲಿ ಮತ್ಸ್ಯ ತೀರ್ಥ ಹೊಳೆಯಲ್ಲಿ ನೀರಿನ ಪ್ರಮಾಣ ತುಂಬಾ ಇಳಿಮುಖಗೊಂಡಿದೆ. ಇದರಿಂದ ನೀರು ಬಿಸಿಯಾಗಿ ಮೀನುಗಳಿಗೆ ಉಸಿರಾಡಲು ಸಮಸ್ಯೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದವು. ಮೀನುಗಳ ಸಮಸ್ಯೆಯನ್ನು ಅರಿತ ದೇವಳದವರು ಮೀನುಗಳ ಜೀವಕ್ಕೆ ಕುತ್ತು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಹೊಳೆಯಲ್ಲಿ ಹರಿಯುವ ನೀರ‌ನ್ನೆ ಪಂಪ್ ಮಾಡಿ ಮತ್ತೆ ನೀರನ್ನು ಹೊಳೆಯ ಮೇಲ್ಬಾಗಕ್ಕೆ ಬಿಡುವ ಕೆಲಸ ಮಾಡಲಾಗುತ್ತಿದೆ.
ರಾತ್ರಿ ಸಮಯ ಗುಡ್ಡದ ಮೇಲಿನ ನೀರನ್ನು ಪೈಪು ಮೂಲಕ ತಂದು ಟ್ಯಾಂಕಿಯಲ್ಲಿ ಶೇಖರಣೆ ಮಾಡಿ ಅದನ್ನು ಬಿಡಲಾಗುತ್ತಿದೆ.

ಮೀನುಗಳಿಗೆ ತಿಂಗಳು ಮುಂಚಿತವಾಗಿ ನೀರಿನ ಕೊರತೆ

ಪ್ರತಿ ವರ್ಷ ಏಪ್ರಿಲ್ ಮೇ ತಿಂಗಳಿನಲ್ಲಿ ಮತ್ಸ್ಯ ತೀರ್ಥ ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾದರೆ ಈ ವರ್ಷ ಮೇ ತಿಂಗಳಿನಲ್ಲಿಯೇ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. 2013ನೇ ಇಸವಿಯಲ್ಲಿ ಈ ರೀತಿಯಲ್ಲಿ ಮೀನುಗಳಿಗೆ ತೀವ್ರ ನೀರಿನ‌ ಕೊರತೆ ಎದುರಾಗಿತ್ತು. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಈ ಸಮಯದಲ್ಲಿ ಮೀನುಗಳಿಗೆ ನಾಲ್ಕು ಇಂಚು ನೀರಿನ ಹರಿಯುವಿಕೆ ಅಗತ್ಯವಾಗಿದೆ ಎಂದು ದೇವಳದವರು ಹೇಳುತ್ತಾರೆ.

ಮೀನುಗಳಿಗೆ ಹರಕ್ಕೆಹೇಳಿಕೊಂಡರೆ ಚರ್ಮರೋಗ ವಾಸಿ

ಇಲ್ಲಿಯ ದೇವರ ಮೀನುಗಳಿಗೆ ಆಹಾರ ಹಾಕುತ್ತೇವೆ ಎಂದು ಹರಕ್ಕೆ ಹೇಳಿಕೊಂಡರೆ ಚರ್ಮ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.ಹರಕ್ಕೆ ಹೇಳಿಕೊಂಡ ನೂರಾರು ಮಂದಿಗೆ ಇಲ್ಲಿ ಚರ್ಮ ರೋಗ ವಾಸಿಯಾದ ಉದಾಹರಣೆಗಳಿವೆ.ಕರ್ನಾಟದ ಮೂಲೆ ಮೂಲೆಗಳಿಂದ ಚರ್ಮ ರೋಗ ಹೊಂದಿರುವವರು ದೇವಳಕ್ಕೆ ಬಂದು ಹರಕ್ಕೆ ಒಪ್ಪಿಸುತ್ತಿದ್ದಾರೆ.
ನೀರಿನ‌ ಕೊರತೆ ಹಿನ್ನಲೆಯಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುವ ತನ‌ಕ ಮೀನುಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ.ಮೀನುಗಳಿಗೆ ಆಹಾರದ ಹರಕ್ಕೆ ಈ ಸಮಯದಲ್ಲಿ ಹರಕ್ಕೆ ಒಪ್ಪಿಸುವರು ಆಹಾರವನ್ನು ದೇವಳದ ಕಚೇರಿಗೆ ತಂದೋಪ್ಪಿಸಬಹುದು.ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಬಳಿಕ ದೇವಳದವರು ಮೀನುಗಳಿಗೆ ಹರಕೆಯ ಆಹಾರ ಹಾಕುತ್ತಾರೆ.

ಈಗಾಗಲೇ ತಾಲೂಕಿನ ಆಲೆಟ್ಟಿ ಅರಂತೋಡು,ಅಜ್ಜಾವರ ಸಂಪಾಜೆ ಗ್ರಾಮದಲ್ಲಿ ಹೊಳೆ ತೋಡಿನಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖಗೊಂಡಿದೆ.ಕೆಲವು ಹೊಳೆ ತೋಡು ಕೆರೆಗಳು ಬತ್ತಿ ಹೋಗಿವೆ.ಈ ಕಾರಣದಿಂದ ಹೆಚ್ಷಿನ ರೈತರು ತೋಟಗಳಿಗೆ ನೀರು ಹಾಯಿಸುವ ಕೆಲಸವನ್ನು ಸ್ಥಗೀತಗೊಳಿಸಿದ್ದಾರೆ.

ಮತ್ಸ್ಯ ತೀರ್ಥ ಹೊಳೆಯಲ್ಲಿ ಸಾವಿರಾರು ದೇವರ ಮೀನುಗಳಿದ್ದು ಅವುಗಳಿಗೆ ಈ ವರ್ಷ ತೀವ್ರ ನೀರಿನ‌ ಕೊರತೆ ಎದುರಾಗಿದ್ದು ಅವುಗಳಿಗೆ ದೇವಳದ ವತಿಯಿಂದ ಕೃತಕವಾಗಿ ನೀರನ್ನು ಪ್ರೀ ಸೈಕ್ಲಿಂಗ್ ಮಾಡುವ ಕೆಲಸ ನಡೆಯುತ್ತಿದೆ.
-ಆನಂದ ಕಲ್ಲಗದ್ದೆ, ವ್ಯವಸ್ಥಾಪಕರು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ