ಅಜ್ಜಾವರ ಮೇನಾಲ ಉರೂಸ್ : ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0

ಅಜ್ಜಾವರ ಮೇನಾಲದಲ್ಲಿ ವರ್ಷ ಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಸಂಬಂಧಿಸಿ ಇಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಠಾಣಾ ಉಪನಿರೀಕ್ಷಕ ದಿಲೀಪ್ ರವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
ಕಳೆದ ಕೆಲವು ವರ್ಷಗಳಿಂದ ಮೇನಾಲದಲ್ಲಿ ಉಂಟಾಗಿರುವ ಕೆಲವು ಗೊಂದಲಗಳಿಂದ ಎರಡು ಪಂಗಡದ ಕೆಲವು ಮುಖಂಡರ ನಡುವೆ ಸಣ್ಣಪುಟ್ಟ ತಕರಾರುಗಳು ನಡೆಯುತ್ತಿದ್ದು ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣೆಯ ಕಾಲ ಇರುವ ಕಾರಣ ಈ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಸುವುದಾದರೆ ಸಂಬಂಧಿಸಿದ ಇಲಾಖೆಯ ಅನುಮತಿಯ ಮೇರೆಗೆ ನಡೆಸಲು ಪೊಲೀಸ್ ಇಲಾಖೆ ಈಗಾಗಲೇ ಸೂಚನೆ ನೀಡಿದೆ.


ಆದ್ದರಿಂದ ಉರೂಸಿಗೆ ಸಂಬಂಧಿಸಿದ ಆಡಳಿತ ಸಮಿತಿಯವರು ಸಂಬಂಧಿಸಿದ ಇಲಾಖೆಯ ಅನುಮತಿಗಾಗಿ ಪ್ರಯತ್ನಿಸುತ್ತಿದ್ದು, ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮತ್ತು ಸುಳ್ಯದ ತಹಶೀಲ್ದಾರರಿಗೆ ಮನವಿ ನೀಡಿ ಅನುಮತಿ ಲಭಿಸಿದ್ದಲ್ಲಿ ಮುಂದಿನ ವಾರದಲ್ಲಿ ಉರೂಸ್ ಸಮಾರಂಭ ನಡೆಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರು ಈ ಪರಿಸರದ ಎರಡು ಮುಖಂಡರುಗಳನ್ನು ಇಂದಿನ ಶಾಂತಿ ಸಭೆಗೆ ಕರೆಯಲಾಗಿದ್ದು ಸಭೆಯಲ್ಲಿ ಕೇವಲ ಮುಸ್ಲಿಂ ಸಮುದಾಯದ ಮುಖಂಡರುಗಳು ಮಾತ್ರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ದಿಲೀಪ್ ರವರು ಉರೂಸ್ ಕಾರ್ಯಕ್ರಮ ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರವನ್ನು ಲಿಖಿತ ರೂಪದಲ್ಲಿ ಪಡೆದುಕೊಂಡು ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲು ಮಾಹಿತಿ ನೀಡಿದರು. ಪ್ರಸ್ತುತ ಚುನಾವಣೆಯ ಸಂದರ್ಭ ವಾಗಿದ್ದು ನೀತಿ ಸಂಹಿತೆಯನ್ನು ಅನುಸರಿಸಿಕೊಂಡು ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ನಿಮ್ಮ ನಿಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು.ಆದರೆ ಅನುಮತಿ ಪತ್ರ ದೊಂದಿಗೆ ಮಾತ್ರ, ಅದಲ್ಲದೆ ಯಾವುದೇ ಚಟುವಟಿಕೆಗಳನ್ನು ಮಾಡಬಾರದೆಂದು ತಿಳಿಸಿದರು.
ಇದಕ್ಕೆ ಒಪ್ಪಿರುವ ಮುಸ್ಲಿಂ ಮುಖಂಡರು ನಾವು ಈಗಾಗಲೇ ಎಸಿ ಯವರನ್ನು ಮತ್ತು ಸುಳ್ಯ ತಹಶೀಲ್ದಾರರನ್ನು ಭೇಟಿ ಮಾಡಿದ್ದು ಅವರಿಂದ ಅನುಮತಿ ಸಿಗುವ ಭರವಸೆ ನಮಗಿದೆ. ಆದ್ದರಿಂದ ಅನುಮತಿ ಪತ್ರ ಪಡೆದ ಬಳಿಕ ಶಾಂತಿ ಸೌಹಾರ್ದತೆಗೆ ಧಕ್ಕೆ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಜ್ಜಾವರ ಮೇನಾಲ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಕೋಶಾಧಿಕಾರಿ ಶರೀಫ್ ರಿಲ್ಯಾಕ್ಸ್, ಸಮಿತಿಯ ಪದಾಧಿಕಾರಿಗಳು, ಮುಖಂಡರುಗಳಾದ ಶಾಫಿ ಮಡಿಕೇರಿ, ಶಾಫಿ ದಾರಿಮಿ, ಸಿದ್ದೀಕ್ ಡೆಲ್ಮ, ಅಂದ ಹಾಜಿ ಪ್ರಗತಿ, ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಶಾಂತಿ ಸಭೆಯಲ್ಲಿ ತನಿಖಾ ವಿಭಾಗದ ಎಸ್ ಐ ಶಾಹಿದ್ ಅಫ್ರಿದಿ ಉಪಸ್ಥಿತರಿದ್ದರು.