ಮೇನಾಲ ಉರೂಸ್ : ವಿವಾದಿತ ಜಾಗದಲ್ಲಿ ಅನುಮತಿ – ಬಿಜೆಪಿ ಮಂಡಲ ಸಮಿತಿ ಆಕ್ಷೇಪ

0

ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ : ಸುಭೋದ್ ಶೆಟ್ಟಿ ಮೇನಾಲ

ವಿವಾದಿತ ಜಾಗದಲ್ಲಿ ಮೇನಾಲ ಉರೂಸ್ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.


ಜೂ.೧೭ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಜ್ಜಾವರ ಗ್ರಾಮದ ಮೇನಾಲ ಉರೂಸ್ ಕಾರ್ಯಕ್ರಮವನ್ನು ಮೇನಾಲ ಮಸೀದಿಯ ಪಕ್ಕದ ಜಾಗದಲ್ಲಿ ಮಾಡಬಹುದು. ಮೇನಾಲ ಕುಟುಂಬಸ್ಥರಿಗೆ ಸೇರಿದ ಮಸೀದಿಯ ಎದುರಿನ ಜಾಗ ವಿವಾದ ಇರುವುದರಿಂದ ವಿವಾದ ಇತ್ಯರ್ಥ ಆಗುವ ತನಕ ಅಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ಹಿಂದೆ ಜಿಲ್ಲಾಧಿಕಾರಿಗಳು ಹೇಳಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿ ವಿವಾದಿತ ಜಾಗದಲ್ಲೇ ಉರೂಸ್ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಜಿಲ್ಲಾಡಳಿತದ ಈ ಕ್ರಮವನ್ನು ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತದೆ. ಹೈಕೋರ್ಟು ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದರು.


ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ ಡಿಸಿಯವರು ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳ ಅಭಿಪ್ರಾಯ ಪಡೆದ ಬಳಿಕ ೧೫೫/೨ ಸರ್ವೆ ನಂಬ್ರದಲ್ಲಿ ಅನುಮತಿ ಕೊಟ್ಟಿದ್ದರು. ೧೫೫/೧ ರಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಆ ಸಂದರ್ಭದಲ್ಲಿ ನಾವು ಕೂಡಾ ಆಕ್ಷೇಪ ಸಲ್ಲಿಸಿದ್ದೆವು. ಇದಾದ ೧೫ ದಿನ ಕಳೆದ ನಂತರ ಯಾವುದೇ ಅರ್ಜಿ ಇಲ್ಲದೇ, ನ್ಯಾಯಾಲಯದ ಅನುಮತಿ ಇಲ್ಲದೆ ಮೊದಲು ಕೊಟ್ಟ ಅನುಮತಿಯನ್ನು ತಿದ್ದುಪಡಿ ಮಾಡಿ ಪರಿಸ್ಕೃತ ಆದೇಶ ಮಾಡಿದ್ದು ವಿವಾದಿತ ಜಾಗದಲ್ಲಿ ಅವಕಾಶ ನೀಡಿದ್ದಾರೆ.

ಇದು ಏಕಪಕ್ಷಿಯ ನಿರ್ಧಾರ. ಕಾಂಗ್ರೆಸ್ ಸರಕಾರ ಹಾಗೂ ಜನಪ್ರತಿನಿಧಿಗಳು ಇದನ್ನು ಮಾಡಿದ್ದಾರೆ. ಇದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ನೋವುಂಟಾಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು.