ಪೆರಾಜೆ : ಬಿಜೆಪಿ ಶಕ್ತಿ ಕೇಂದ್ರದ ಮಾಸಿಕ ಸಭೆ

0

ಪೆರಾಜೆ ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರದ ಮಾಸಿಕ ಸಭೆಯು ಜು.11 ರಂದು ಗ್ರಾಮ ಪ್ರಮುಖ್ ನಂಜಪ್ಪ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ದುಷ್ಕರ್ಮಿಗಳ ಕೃತ್ಯಗಳಿಗೆ ಬಲಿಯಾದ ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಕಗ್ಗೊಲೆಯನ್ನು ಖಂಡಿಸಿ ನಿರ್ಣಯ ಕೈಕೊಳ್ಳಲಾಯಿತು ಹಾಗೂ ಇತ್ತೀಚಿಗೆ ನಿಧನರಾದ ಬಿಜೆಪಿ ಕಾರ್ಯಕರ್ತ ಭಾರದ್ವಾಜ್ ಬಂಗಾರಕೋಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಇತ್ತೀಚಿಗೆ ನಡೆದ ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳನ್ನೂ ಗೆದ್ದ ಎಲ್ಲಾ ನಿರ್ದೇಶಕರುಗಳಿಗೆ ಹಾಗೂ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾದ ಅಶೋಕ್ ಪೆರುಮುಂಡ ಹಾಗೂ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.


ಸಭೆಯಲ್ಲಿ ಬಿಜೆಪಿ ಜಿಲ್ಲಾ ಕೃಷಿ ಮೋರ್ಚಾದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಜಗತ್ತಿಗೆ ಶಾಂತಿ, ಅಹಿಂಸೆ, ಸತ್ಯದ ರಾಯಭಾರಿ ಆಗಿದ್ದ ಜೈನ ಧರ್ಮದ ಒಬ್ಬ ಮುನಿಯ ಕೊಲೆ ಆಗಿದ್ದು ವಿಷಾದನೀಯ, ಕಾನೂನು ವ್ಯವಸ್ಥೆ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಿ ಜನರಲ್ಲಿ ಕಾನೂನು ಕ್ರಮಗಳ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಉನ್ನತ ಮಟ್ಟದ ತನಿಖೆಗಾಗಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಪೆರಾಜೆ ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಹಕಾರಿ ಸಂಘದ ಚುನಾವಣೆಯಲ್ಲಿ ಸಾಬೀತಾಗಿದೆ. ಕೃಷಿಕರು ಸಹಕಾರಿ ಸಂಘದ ಬಿಜೆಪಿ ಆಡಳಿತದ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಸಂಪೂರ್ಣ ಬಹುಮತದ ಅಧಿಕಾರ ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿಬಾರದಂತೆ ಕಾರ್ಯನಿರ್ವಹಿಸಲು ನೂತನ ಚುನಾಯಿತ ನಿರ್ದೇಶಕರುಗಳಿಗೆ ಕರೆ ನೀಡಿದರು.


ಸಭೆಯಲ್ಲಿ ಗ್ರಾಮ ಅಭಿವೃದ್ದಿಯ ಬಗ್ಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜನಪ್ರತಿನಿಧಿಗಳು, ಕಾರ್ಯಕರ್ತರು, ಬೂತ್ ಮಟ್ಟದ ಪದಾಧಿಕಾರಿಗಳು ಹಾಜರಿದ್ದರು. ಸಹ ಪ್ರಮುಖ್ ಚಿನ್ನಪ್ಪ ಅಡ್ಕ ವಂದಿಸಿದರು.