ಜಿ.ಪಂ., ತಾ.ಪಂ. ಕ್ಷೇತ್ರಗಳ ಸಂಖ್ಯೆ, ವ್ಯಾಪ್ತಿ ನಿರ್ಣಯದ ಸಭೆಯಲ್ಲಿ ವಾಗ್ವಾದ

0

ಪೆರುವಾಜೆ, ಕೊಡಿಯಾಲ, ಮುರುಳ್ಯ ತಾ.ಪಂ. ಕ್ಷೇತ್ರವಾಗಲಿ – ಬಿಜೆಪಿ ಒತ್ತಾಯ

ಬೆಳ್ಳಾರೆ, ಪೆರುವಾಜೆ, ಕೊಡಿಯಾಲಕ್ಕೆ ಕಾಂಗ್ರೆಸ್ ಪಟ್ಟು

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆ, ವ್ಯಾಪ್ತಿ ನಿರ್ಣಯದ ಸಭೆಯು ತಾಲೂಕು ಕಚೇರಿಯಲ್ಲಿ ಜು.24 ರಂದು ನಡೆಯಿತು. ತಹಶೀಲ್ದಾರ್ ಮಂಜುನಾಥ್ ರ ಅಧ್ಯಕ್ಷತೆಯಲ್ಲಿ, ಶಾಸಕಿ ಭಾಗೀರಥಿ ಮುರುಳ್ಯ ರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಕ್ಷೇತ್ರ ವಿಂಗಡಣೆ ವಿಚಾರವಾಗಿ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ರ ಮಧ್ಯೆ ವಾಗ್ವಾದ ನಡೆಯಿತು.

ತಹಶೀಲ್ದಾರ್ ಮಂಜುನಾಥ್ ಹಾಗೂ ಉಪತಹಶೀಲ್ದಾರ್ ಚಂದ್ರಕಾಂತ್ ರವರು ಸುಳ್ಯದ ಜನಸಂಖ್ಯೆ ಆಧಾರದಲ್ಲಿ 3 ಜಿ.ಪಂ. ಹಾಗೂ 11 ತಾ.ಪಂ. ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದೆ ಎಂದು ಹೇಳಿ ವಿಂಗಡಣೆಯ ಪಟ್ಟಿಯನ್ನು ಪಕ್ಷ ಮುಖಂಡರಿಗೆ ನೀಡಿದರು.

ಇದನ್ನು ನೋಡಿ ಬಿಜೆಪಿಯ ಹರೀಶ್ ಕಂಜಿಪಿಲಿಯವರು ಪೆರುವಾಜೆ – ಕೊಡಿಯಾಲ- ಮುರುಳ್ಯ ಈ ಹಿಂದೆ ಸಭೆಯಲ್ಲಿ ಆದಂತೆ ತಾ.ಪಂ. ಕ್ಷೇತ್ರ ಇರಲಿ. ಬದಲಾವಣೆಗೆ ನಮ್ಮ ಆಕ್ಷೇಪ ಇದೆ ಎಂದು ಹೇಳಿದರು. ಆಗ ಕಾಂಗ್ರೆಸ್ ನ ಪಿ.ಎಸ್.ಗಂಗಾಧರ್ ರವರು ಬೆಳ್ಳಾರೆ, ಪೆರುವಾಜೆ, ಕೊಡಿಯಾಲ ತಾ.ಪಂ. ಕ್ಷೇತ್ರ ಇರಲಿ. ಈ ಹಿಂದೆಯೇ ಹಾಗೇ ಇದೆ ಅದನ್ನು ಬದಲು ಮಾಡುವುದು ಬೇಡ. ಭೌಗೋಳಿಕವಾಗಿಯೂ ಇದೆ ಎಂದು ಸಲಹೆ ನೀಡಿದರು. ರಾಜೀವಿ ಆರ್ ರೈಯವರು ಕೂಡಾ ಇದೇ ಸಲಹೆ ನೀಡಿದರು.


ಈ ವೇಳೆ ಹರೀಶ್ ಕಂಜಿಪಿಲಿ ಯವರು ಬಿಜೆಪಿ ಪಕ್ಷದ ವತಿಯಿಂದ ನಾವು ಹೇಳಿದ ಪ್ರಸ್ತಾವನೆ ‌ಬರೆದುಕೊಳ್ಳಿ ಎಂದು ಹೇಳಿದಾಗ, ಇಲ್ಲಿ ಪಕ್ಷದ ವಿಚಾರ ಅಲ್ಲ. ಎಲ್ಲರೂ ಸೇರಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳೋಣ. ಭೌಗೋಳಿಕವಾಗಿಯೂ ವ್ಯಾಪ್ತಿಯನ್ನು ನೋಡೋಣ ಎಂದು ಪಿ.ಎಸ್.ಗಂಗಾಧರ್ ಹೇಳಿದರು. “ಅದು ಬೌಗೋಳಿಕವಾಗಿ ಸರಿ ಇದೆ. ಇದು ಪಕ್ಷದವರ ಸಲಹೆ ನೀಡಲು ಕರೆದ ಸಭೆ.‌ನಾವು ನಮ್ಮ ಪಕ್ಷದ ವತಿಯಿಂದಲೇ ಸಲಹೆ ನೀಡೋದು. ಅದನ್ನು ಬರೆದುಕೊಳ್ಳಿ ಎಂದು ಎಂದು ತಮ್ಮ ವಾದ ಮಂಡಿಸಿದರು. ಪಿ.ಎಸ್.ಗಂಗಾಧರ್ ರವರು ತಮ್ಮ ಪ್ರಸ್ತಾವನೆ ಬರೆದುಕೊಳ್ಳುವಂತೆ ಯೂ ಸಲಹೆ ನೀಡಿದರು.
ಈ ವೇಳೆ ಹರೀಶ್ ಕಂಜಿಪಿಲಿ ಹಾಗೂ ಪಿ.ಎಸ್.ಗಂಗಾಧರ್ ನಡುವೆ ವಾಗ್ವಾದ ನಡೆದ ಘಟನೆಯೂ ನಡೆಯಿತು.
ಬಳಿಕ ಎರಡು‌ ಪಕ್ಷದ ನಾಯಕರು ನೀಡಿದ ಪ್ರಸ್ತಾವನೆಯನ್ನು ಬರೆದುಕೊಳ್ಳಲಾಯಿತು.

ಜಿ.ಪಂ. ಕ್ಷೇತ್ರ ವಿಂಗಡಣೆಗೆ ಆಕ್ಷೇಪ : 3 ಜಿ.ಪಂ. ಕ್ಷೇತ್ರ ವಿಂಗಡಣೆ ಸರಿಯಲ್ಲಿ. ಗುತ್ತಿಗಾರು ಕ್ಷೇತ್ರ ಸಂಪಾಜೆಯಿಂದ ಕಲ್ಮಕಾರು ವರೆಗೆ ಇದೆ. ಇದು ಸರಿಯಲ್ಲ. ಆದ್ದರಿಂದ ನಾಲ್ಕು ಜಿ.ಪಂ. ಕ್ಷೇತ್ರ ಮಾಡಬೇಕು ಎಂದು ಪಿ.ಎಸ್.ಗಂಗಾಧರ್ ಹೇಳಿ ಕ್ಷೇತ್ರ ವಿಂಗಡಣೆ ಮಾಡಬಹುದಾದ ಸಾಧ್ಯತೆಯ ವಿವರ ನೀಡಿದರು.

“4 ಜಿ.ಪಂ ಕ್ಷೇತ್ರ ಆದರೆ ಒಳ್ಳೆಯದೇ.‌ಆದರೆ ಇನ್ನೂ ಬದಲಾವಣೆಗೆ ಅವಕಾಶ ‌ಇದೆಯೋ ಎಂಬುದು ನೋಡಬೇಕು.‌ಬದಲಾವಣೆ ಇದ್ದರೆ ನಾವು ಕ್ಷೇತ್ರ ವಿಂಗಡಣೆಯ ಕುರಿತು ವಿವರ ನೀಡುತ್ತೇವೆ. ಈಗ ನಾವು ತಂದಿಲ್ಲ ಎಂದು ಕಂಜಿಪಿಲಿ ಹೇಳಿದರು.

ಸಭೆಯ ಕೊನೆಯಲ್ಲಿ ಇಂದಿನ ಸಭೆಯ ಚರ್ಚೆ ‌ಹಾಗೂ ಪ್ರಸ್ತಾವನೆ ಕುರಿತು ಆಯೋಗಕ್ಕೆ ಕಳುಹಿಸುವ ಕುರಿತು ತಹಶೀಲ್ದಾರ್ ‌ಹೇಳಿದರಲ್ಲದೆ, ನಿರ್ಣಯವನ್ನು ಓದಿದರು.

ಕಾಂಗ್ರೆಸ್ ನ ಸದಾನಂದ ಮಾವಜಿ, ಅನಿಲ್ ಬಳ್ಳಡ್ಕ, ಜೆಡಿಎಸ್ ನ ರಾಕೇಶ್ ಕುಂಟಿಕಾನ, ಬಿಜೆಪಿಯ ಎ.ವಿ. ತೀರ್ಥರಾಮ, ಎಸ್.ಎನ್. ಮನ್ಮಥ, ಮಾಧವ ಚಾಂತಾಳ, ಸುನಿಲ್ ಕೇರ್ಪಳ, ಶ್ರೀನಾಥ್ ರೈ,ಮಹೇಶ್ ರೈ ಮೇನಾಲ ಇದ್ದರು.