ಬೆಳ್ಳಾರೆ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಸಂಭ್ರಮ

0

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ 77 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಮೇಜರ್ ಡಾ.ಕುಶ್ವಂತ್ ಕೋಳಿಬೈಲ್, ಶಾಲಾ ಸಂಚಾಲಕರಾದ ಎಂ.ಪಿ.ಉಮೇಶ್ ಹಾಗೂ ಪ್ರಾಂಶುಪಾಲರಾದ ದೇಚಮ್ಮ ಟಿ.ಎಂ. ಧ್ವಜಾರೋಹಣ ನೆರವೇರಿಸಿದರು.


ಮುಖ್ಯ ಅಥಿತಿಗಳು ಧ್ವಜಾರೋಹಣ ನೆರವೇರಿಸಿದ ಬಳಿಕ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ, ಧ್ವಜಗೀತೆ ಮತ್ತು ವಂದೇ ಮಾತರಂ ಹಾಡುವ ಮೂಲಕ ಧ್ವಜ ಗೌರವ ಸಲ್ಲಿಸಿದರು.
ನಂತರ ಮಾತನಾಡಿದ ಶಾಲಾ ಪ್ರಾಂಶುಪಾಲರು ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹನೀಯರ ಸ್ಮರಣೆ, ಸಂಸ್ಕೃತಿ ಪರಂಪರೆ, ಸುತ್ತಲಿನ ಪರಿಸರ ಸಂರಕ್ಷಣೆ, ಸ್ವಚ್ಛಭಾರತ ನಮ್ಮ ಪವಿತ್ರ ಕರ್ತವ್ಯವಾಗಬೇಕು ಎಂಬ ಸ್ವಾತಂತ್ರ್ಯದ ಸಂದೇಶವನ್ನು ನೀಡಿದರು.


ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ದೇಶಭಕ್ತಿ ಗೀತೆಯೊಂದಿಗೆ ಆರಂಭಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಗೀತಾಮಣಿ ಸ್ವಾತಂತ್ರ್ಯ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಸ್ವಾತಂತ್ರ್ಯ ಪೂರ್ವ ಭಾರತದ ಸ್ಥಿತಿಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.


ನಂತರ ಮಾತನಾಡಿದ ಮುಖ್ಯ ಅತಿಥಿ ಮೇಜರ್.ಡಾ. ಕುಶ್ವಂತ್ ಕೋಳಿಬೈಲು, ವಿದ್ಯಾರ್ಥಿಗಳು ಭಾರತದ ವಿವಿಧತೆಯಲ್ಲಿ ಪರಸ್ಪರ ಐಕ್ಯತೆಯಿಂದ ಬದುಕುವುದನ್ನು ತಿಳಿಯಬೇಕು. ಇದೇ ಅವರು ಸ್ವಾತಂತ್ರ್ಯಕ್ಕಾಗಿ ಜೀವತ್ಯಾಗ ಮಾಡಿದ ಮಹಾತ್ಮರಿಂದ ಪಡೆದುಕೊಳ್ಳಬೇಕಾದ ಸಂದೇಶ. ವಿದ್ಯಾರ್ಥಿಗಳು ಲಭ್ಯವಿರುವ ಸಾಮಾಜಿಕ ಜಾಲತಾಣಗಳನ್ನು ವಿವೇಕದಿಂದ ಬಳಸಿಕೊಂಡು ಸನ್ಮಾರ್ಗಿಗಳಾಗಬೇಕು, ಯಾವುದನ್ನು ಕಲಿಯಬೇಕು, ಕಲಿಯಬಾರದು ಎಂಬ ಪ್ರಜ್ಞೆಯಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನುಡಿದರು. ಶಾಲಾ ವಿದ್ಯಾರ್ಥಿ ನಾಯಕ ಸಂಚಯ್ ರೈ ಉಪಸ್ಥಿತರಿದ್ದರು.


ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಾ.ಅಫಮ್ ಮತ್ತು ಧನುಷ್ ರಾಂ ನಿರೂಪಿಸಿದರು. ಸ್ತುತಿ ಎಲ್ಲರನ್ನು ಸ್ವಾಗತಿಸಿ, ಆಪ್ತಿ ಲಕ್ಷ್ಮಿ ವಂದಿಸಿದರು.