ಧಾರ್ಮಿಕ ದತ್ತಿ ಆಯುಕ್ತರಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಳೆ ಕಾರು ಮರಳಿ ಸುಬ್ರಹ್ಮಣ್ಯಕ್ಕೆ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಕೆಗೆ ಖರೀದಿಸಿದ್ದ ಇನ್ನೋವಾ ಕಾರು 4 ವರ್ಷಗಳಿಂದ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಓಡಾಡುತ್ತಿದ್ದು ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಮತ್ತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮರಳಿದೆ. ಆದರೆ ಎರಡು ವರ್ಷ ಹಿಂದೆ ಖರೀದಿಸಿದ್ದ ಮತ್ತೊಂದು ಕಾರನ್ನು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನಿಲ್ಲಿಸಿಕೊಂಡ ಘಟನೆ ವರದಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ಕಾರು ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಕಾರನ್ನು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಸರಕಾರದ ಮಟ್ಟದಲ್ಲಿ ನಡೆಯುವ ಸಭೆಗಳು, ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಹಾಜರಾಗಲು ಅನುಕೂಲವಾಗುವಂತೆ ತಾತ್ಕಾಲಿಕ ನೆಲೆಯಲ್ಲಿ ವಾಹನವನ್ನು ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2019 ರಲ್ಲಿ ಸೂಚನೆ ನೀಡಿದ್ದರು, ಅದರಂತೆ ಕಳುಹಿಸಿ ಕೊಡಲಾಗಿತ್ತು.

ದೇವಸ್ಥಾನದವರು ಕೊಟ್ಟ ಕಾರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಓಡಾಡುತ್ತಿದ್ದರೂ, ಪ್ರತಿವರ್ಷ ಇನ್ಶೂರೆನ್ಸ್ ಮೊತ್ತ, ಸಿಗ್ನಲ್ ಜಂಪ್ ಸೇರಿದಂತೆ ಮೋಟಾರು ವಾಹನ ನಿಯಮಗಳ ಉಲ್ಲಂಘನೆಗೆ ನೀಡಲಾಗುವ ಎಲ್ಲಾ ನೋಟಿಸ್ ಗಳು ದೇವಸ್ಥಾನಕ್ಕೆ ಬರುತ್ತಿತ್ತು. ಹಲವು ಬಾರಿ ದಂಡದ ಮೊತ್ತವನ್ನು ದೇವಳ ಖಾತೆಯಿಂದ ಸಂದಾಯ ಮಾಡಲಾಗುತಿತ್ತು. ವಾಹನ ಬೆಂಗಳೂರಿಗೆ ಹೋದ ಬಳಿಕ 2 ತಿಂಗಳಿಗೊಮ್ಮೆ 50 ಸಾವಿರ ರೂ.ವನ್ನು ನಿರ್ವಹಣೆ ಹಾಗೂ ಇತರ ಖರ್ಚು ಎಂದು ದೇವಸ್ಥಾನದಿಂದಲೇ ನಿರ್ವಹಣೆ ಮಾಡಲಾಗುತ್ತೆನ್ನಲಾಗಿದೆ. ಬೆಂಗಳೂರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಲ್ಲಿ ಬಳಕೆ ಮಾಡಿ ಅದರ ನಿರ್ವಹಣೆಗೆ ಮೊತ್ತವನ್ನು ದೇವಸ್ಥಾನದ ಖಾತೆಯಿಂದ ವಸೂಲಿ ಮಾಡುತ್ತಿರುವುದಕ್ಕೆ ವೇಳೆ ಲೆಕ್ಕಪರಿಶೋದಕರು, ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ 2 ತಿಂಗಳಿಗೊಮ್ಮೆ ಸಲ್ಲಿಕೆಯಾಗುತ್ತಿದ್ದ ನಿರ್ವಹಣಾ ಮೊತ್ತ 50 ಸಾವಿರ ರೂ.ಗೆ ತಡೆ ಬಿದ್ದಿದೆ, ಇತರ ಮೊತ್ತಗಳು ಈಗಲೂ ದೇವಳದಿಂದ ಸಂದಾಯವಾಗುತ್ತಿದೆ ಎಂದು ತಿಳಿದು ಬಂದಿದೆ. ಭಕ್ತರ ದುಡ್ಡಿನಿಂದ ಖರೀದಿ ಮಾಡಿ ದೇವಳದ ಅಗತ್ಯಕ್ಕೆ ಖರೀದಿಸಿದ್ದ ಈ ಕಾರು ಬೆಂಗಳೂರಿನಲ್ಲಿ ಓಡಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿ ಮಾದ್ಯಮ ವರದಿಯ ಬಳಿಕ ಎಚ್ಚೆತ್ತ ಇಲಾಖೆ 2019 ರ ಕಾರನ್ನು ಹಿಂತಿರುಗಿಸಿದೆ.

ಇತ್ತೀಚೆಗೆ, ಈಗಾಗಲೇ ದೇವಸ್ಥಾನದಲ್ಲಿದ್ದ 2021 ರಲ್ಲಿ ಖರೀದಿಸಿದ ಕಾರಲ್ಲಿ ಕಾರ್ಯನಿರ್ವಹಣಾಧಿಕಾರಿ ಅವರು ಬೆಂಗಳೂರಿನಿ ಧಾರ್ಮಿಕ ದತ್ತಿ ಇಲಾಖೆಗೆ ಮೀಟಿಂಗ್ ಗೆ ತೆರಳಿದ್ದ ಸಂದರ್ಭ ಅದನ್ನು ಅಲ್ಲೇ ನಿಲ್ಲಿಸಿಕೊಂಡು ಅಲ್ಲಿದ್ದ ಕಾರನ್ನು ಸುಬ್ರಹ್ಮಣ್ಯಕ್ಕೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ನ.8 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಷಷ್ಠಿ ಯ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರನ್ನು ಪ್ರಶ್ನಿಸಿದಾಗ ಈ ಸಂಬಂಧ ಈಗಷ್ಟೆ ಗಮನಕ್ಕೆ ಬಂದಿದೆ ತಕ್ಷಣವೇ ಈ ಬಗ್ಗೆ ಕೇಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಖರೀದಿಸಲಾದ ಕಾರನ್ನು ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಛೇರಿ ಬೆಂಗಳೂರಿಗೆ ಕರೆಸಿಕೊಂಡಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಅದನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದೇನೆ ಎಂದು ಧಾರ್ಮಿಕ ಪರಿಷತ ಸದಸ್ಯೆ ಮಲ್ಲಿಕಾ ಹೇಳಿದರು. ಧಾರ್ಮಿಕದತ್ತಿ ಆಯುಕ್ತರ ಕಾರನ್ನು ಸಚಿವರು ಬಳಸಿಕೊಳ್ಳುತ್ತಿರುವುದರಿಂದ ಕುಕ್ಕೆಯ ಕಾರನ್ನು ಇಲಾಖೆಯ ಆಯುಕ್ತರು ಬಳಕೆ ಮಾಡುತ್ತಿರುವ ಮಾಹಿತಿ ಬಂದಿದೆ. ಆದರೆ ಆ ರೀತಿ ನಡೆದಿದೆಯಾ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇದೀಗ ಕುಕ್ಕೆಯಲ್ಲಿನ ಕಾರು ಬೆಂಗಳೂರಿನಲ್ಲಿದ್ದುದನ್ನು ಮರಳಿ ಕುಕ್ಕೆಗೆ ಕಳುಹಿಸಿ, ಇಲ್ಲಿನ ಇನ್ನೊಂದು ಕಾರನ್ನು ಮತ್ತೆ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ. ಒಟ್ಟಿನಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಕಾರನ್ನು ಇಲ್ಲಿಯೇ ಉಳಿಸಿಕೊಂಡು ಇಲ್ಲಿ ಓಡಾಟಕ್ಕೆ ಬಳಸಿಕೊಳ್ಳಲು ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ.