ಸುಳ್ಯ, ಕಡಬ ಬ್ಲಾಕ್ ಕಾಂಗ್ರೆಸ್ : ಉಚ್ಛಾಟನೆ ಗಾಯಕ್ಕೆ ಕೆಪಿಸಿಸಿ ಮುಲಾಮು

0


ಉಚ್ಛಾಟನೆ, ಅಮಾನತು ಮತ್ತು ಶೋಕಾಸ್ ನೋಟೀಸ್ ಆದೇಶ ವಾಪಾಸ್

ರಾಜ್ಯ ವಿಧಾನಸಭಾ ಚುನಾವಣೆಯ ಮುಂಚೆ ಹಾಗೂ ನಂತರ ನಡೆದ ಬೆಳವಣಿಗೆಯ ಹಿನ್ನಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ಬ್ಲಾಕ್‌ಗಳಲ್ಲಿ ಉಚ್ಛಾಟನೆ, ಅಮಾನತು ಮತ್ತು ಶೋಕಾಸ್ ನೋಟೀಸ್‌ಗೊಳಗಾದ ಎಲ್ಲಾ ಮುಖಂಡರ ಶಿಸ್ತುಕ್ರಮಗಳನ್ನು ವಾಪಾಸ್ ಪಡೆಯಲಾಗಿದೆ.


ಕರ್ನಾಟಕ ಪ್ರದೇಶ್ ಕಾಂಗ್ರೆಸ್‌ನ ಶಿಸ್ತು ಸಮಿತಿ ಅಧ್ಯಕ್ಷ ಕೆ.ರಹಮ್ಮಾನ್ ಖಾನ್ ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಮಹೇಶ್‌ಕುಮಾರ್ ಕರಿಕ್ಕಳ, ಕೆ.ಗೋಕುಲ್‌ದಾಸ್, ಸಚಿನ್‌ರಾಜ್ ಶೆಟ್ಟಿ,ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ., ಚೇತನ್ ಕಜೆಗದ್ದೆ, ಉಷಾ ಅಂಚನ್, ಆಶಾ ಲಕ್ಷ್ಮಣ ಗುಂಡ್ಯ,ಪ್ರವೀಣ್ ಕೆಡೆಂಜಿ, ರವೀಂದ್ರ ರುದ್ರಪಾದ, ಶೋಭಿತ್ ಸುಬ್ರಹ್ಮಣ್ಯ, ಸೇವಿಯರ್ ಬೇಬಿ,ಸುಧೀರ್ ದೇವಾಡಿಗ, ರಾಮಕೃಷ್ಣ ಕೆಂಜಾಳ, ಜೈನುದ್ದೀನ್ ಆತೂರು, ಆನಂದ ಬೆಳ್ಳಾರೆಇವರ ಮೇಲಿನ ಉಚ್ಛಾಟನೆ ಶಿಸ್ತು ಕ್ರಮವನ್ನು ವಾಪಾಸ್ ಪಡೆಯಲಾಗಿದೆ.

ಕಾಂಗ್ರೆಸ್ ಮುಖಂಡರಾದ ಎಂ.ವೆಂಕಪ್ಪ ಗೌಡ ಹಾಗೂ ಬಾಲಕೃಷ್ಣ ಬಳ್ಳೇರಿ ಅವರಿಗೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ನೀಡಲಾದ ಶೋಕಾಸ್ ನೋಟೀಸನ್ನು ಕೂಡಾ ವಾಪಾಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಕೃಷ್ಣಪ್ಪ ಅವರ ದೂರಿನ ಹಿನ್ನಲೆಯಲ್ಲಿ ಕೆಪಿಸಿಸಿ ೧೭ ಮಂದಿಯನ್ನು ಉಚ್ಚಾಟನೆ ಮಾಡಿತ್ತು. ಅಭ್ಯರ್ಥಿ ಘೋಷಣೆ ಆದ ಬಳಿಕ ಮತ್ತು ಚುನಾವಣಾ ಸಂದರ್ಭದಲ್ಲಿ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನ ನಡೆಸಿಲ್ಲ ಎಂದು ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಕೆಪಿಸಿಸಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಸುಳ್ಯ ಹಾಗೂ ಕಡಬ ಬ್ಲಾಕ್‌ನ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ೧೭ ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಕೆಪಿಸಿಸಿ ಆದೇಶ ಮಾಡಿತ್ತು. ಕೆಲವು ಮುಖಂಡರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದು ಸುಳ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಬಳಿಕ ಮಮತಾ ಗಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿ ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯಲು, ಉಚ್ಚಾಟನೆ ವಾಪಾಸ್ ಪಡೆಯಲು ನಿರ್ಧರಿಸಲಾಗಿತ್ತು. ಇದೀಗ ಉಚ್ಚಾಟನೆ ಆದೇಶ ಅಧಿಕೃತವಾಗಿ ವಾಪಾಸ್ ಪಡೆಯಲಾಗಿದೆ.