ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ದುರ್ಗಾಪೂಜೆ

0

ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸಾವಿತ್ರಿರಾಮ್ ಕಣೆಮರಡ್ಕ ಸೇರಿದಂತೆ ಹಲವರಿಗೆ ಸನ್ಮಾನ

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ) ಸನ್ನಿಧಾನ ಅಡ್ಪಂಗಾಯ ಇದರ ವತಿಯಿಂದ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ದುರ್ಗಾಪೂಜಾ ಕಾರ್ಯಕ್ರಮ ಹಾಗೂ ಅಯ್ಯಪ್ಪ ಸ್ವಾಮಿಗೆ ಸಂಕ್ರಮಣಪೂಜೆಯು ಡಿ. 17 ರಂದು ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ನೆರೆವೇರಿತು.

ಪ್ರಾತಃ ಕಾಲ ಗಣಪತಿ ಹವನ, ಸಂಜೆ ದೀಪಾರಾಧನೆ, ಶಾಂತಿನಗರದ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರುಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ದುರ್ಗಾಪೂಜೆ ಸಚಿನ್ ಕಾಣಿಯೂರು ಹಾಗೂ ಹರ್ಷಕುಮಾರ್ ಮಡಪ್ಪಾಡಿ ಇವರುಗಳು ಸೇವಾರ್ಥವಾಗಿ ನೆರವೇರಿತು.

ನಂತರ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ, ಪ್ರಸಾದ ವಿತರಣಾ ಕಾರ್ಯಕ್ರಮವು ನಡೆಯಿತು.

ನಂತರ ನಡೆದ ‘ಸಾಧಕರುಗಳಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ದೇಶಸೇವೆಯಲ್ಲಿ ತೊಡಗಿಸಿಕೊಂಡು ನಿವೃತ್ತರಾದ ನವೀನ್ ಪಿಂಡಿಮನೆ, ಸುಭೇದಾರ್ ಹೊನ್ನಪ್ಪ ಗೌಡ ಬಾನಾಡಿ (ಏನೇಕಲ್ಲು), ಸಮಾಜ ಸೇವಕ ಮಾಯಿಲಪ್ಪ ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕಿ ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸಾವಿತ್ರಿರಾಮ್ ಕಣೆಮರಡ್ಕರವರುಗಳನ್ನು ಶ್ರೀ ಕ್ಷೇತ್ರದ ಧರ್ಮದರ್ಶಿ ಹಾಗೂ ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯರು ಫಲ-ಪುಷ್ಪ, ಸ್ಮರಣಿಕೆಯೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಊರ ಹಾಗೂ ಪರ-ಊರ ನೂರಾರು ಭಕ್ತರುಗಳು ಹಾಜರಿದ್ದರು. ನಂತರ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು.
ಅನ್ನದಾನ ಸೇವೆಯನ್ನು ನವೀನ್ ಪಿಂಡಿಮನೆ ಮತ್ತು ಮನೆಯವರು ಹಾಗೂ ಸಚಿನ್ ಕಾಣಿಯೂರು ಒದಗಿಸಿಕೊಟ್ಟರು.