ವೈಭವದ ಎಡಮಂಗಲ ಪಂಚಲಿಂಗೇಶ್ವರ ಜಾತ್ರೋತ್ಸವ

0

ಭಕ್ತ ಸಾಗರದ ನಡುವೆ ಮಹಾರಥೋತ್ಸವ

ಶಿರಾಡಿ ರಾಜನ್ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ನಿನ್ನೆ ರಾತ್ರಿ ಮಹಾ ರಥೋತ್ಸವ ನಡೆಯಿತು. ರಾತ್ರಿ ಬಲಿ ಹೊರಟು ಉತ್ಸವ ಬಲಿ ನೆರವೇರಿತು. ಎಡಮಂಗಲ ಕ್ಷೇತ್ರದಲ್ಲಿ ನಡೆಯುವ ಕೋಲಾಟ ಅಪೂರ್ವ ಸಂಪ್ರದಾಯಕ್ಕೆ ಸಾಕ್ಷಿಯಾಯಿತು. ದೈವದ ಪೂಜಾರಿಗಳು ಉತ್ಸವ ಸುತ್ತುಗಳಲ್ಲಿ ಭಾಗಿಯಾದರು. ಚೆಂಡೆ, ವಾದ್ಯ, ವೇದ ಘೋಷ, ಪಂಚ ವಾದ್ಯ, ಭಜನಾ ಸುತ್ತುಗಳ ಬಳಿಕ ವಸಂತ ಕಟ್ಟೆ ಪೂಜೆ, ಪಾಟಾಳಿ ಕಟ್ಟೆ ಪೂಜೆ ನಡೆಯಿತು.

ಮರೋಳಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ ಮತ್ತು ನರ್ತನ ಸೇವೆಯ ಬಳಿಕ ಮಹಾ ರಥೋತ್ಸವ ನಡೆಯಿತು. ಸಹಸ್ರಾರು ಭಕ್ತರು ಭಕ್ತಿ ಶ್ರದ್ಧಾ ಪೂರ್ವಕ ಸಾಕ್ಷಿಯಾದರು. ಬಳಿಕ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆ ಪೂಜೆ, ನಂತರ ಮಹಾಪೂಜೆ, ಶ್ರೀ ಭೂತ ಬಲಿ ನಡೆದು ಶ್ರೀ‌ ದೇವರ ಶಯನೋತ್ಸವ ನಡೆಯಿತು.

ಜಾತ್ರೋತ್ಸವದ ವೇಳೆ ಲಕ್ಷ್ಮಣ ಆಚಾರ್ಯ ಮತ್ತು ಬಳಗದವರಿಂದ ಕೀಲು ಕುದುರೆ ಮತ್ತು ಬೊಂಬೆಯಾಟ ರಂಜನೆ ನೀಡಿತು. ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಶ್ರೀಹರಿ ನೂಚಿಲ, ಪ್ರಧಾನ ಅರ್ಚಕ ಸೀತಾರಾಮಯ್ಯ ನೂಚಿಲ, ವ್ಯವಸ್ಥಾಪನಾ ಸಮಿತಿ‌ ಸದಸ್ಯರುಗಳಾದ ರಾಮಕೃಷ್ಣ ರೈ ಮಾಲೆಂಗ್ರಿ, ಭವಾನಿ ಚಂದ್ರಶೇಖರ ಪರ್ಲ, ಗಿರೀಶ್ ನಡುಬೈಲು, ರವೀಂದ್ರ ದೇರಳ, ದೇವಿಪ್ರಸಾದ್ ದೋಳ್ಪಾಡಿ, ಬಾಲಕೃಷ್ಣ ಬಳಕ್ಕಬೆ, ಪ್ರಿಯಾಂಕ ಪದ್ಮನಾಭ ಉಪಸ್ಥಿತರಿದ್ದರು.

ಜಾತ್ರೋತ್ಸವ ಮತ್ತು ಮಹಾ ರಥೋತ್ಸವವನ್ನು ಸುದ್ದಿ ಚಾನೆಲ್ ನೇರ ಪ್ರಸಾರ ಮಾಡಿದ್ದು ಜಗತ್ತಿನಾದ್ಯಂತ ಸಾವಿರಾರು ಮಂದಿ ವೀಕ್ಷಿಸಿದರು.