ಕನಕಮಜಲು: ಸುಳ್ಯ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಕ್ಕೆ ಸ್ವಾಗತ

0

ತಹಶಿಲ್ದಾರ್, ಇ.ಒ. ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿ

ಸಂವಿಧಾನದ ಮೌಲ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥವು ಫೆ.17ರಂದು ಬೆಳಿಗ್ಗೆ ಕನಕಮಜಲಿನ ಮೂಲಕ ಸುಳ್ಯ ತಾಲೂಕಿಗೆ ಪ್ರವೇಶಿಸಿದ್ದು, ಸುಳ್ಯ ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಬರಮಾಡಿಕೊಳ್ಳಲಾಯಿತು.

ಪುತ್ತೂರಿನಿಂದ ಕನಕಮಜಲಿಗೆ ಜಾಥವು ಆಗಮಿಸಿದಾಗ ಕನಕಮಜಲಿನ ನರಿಯೂರು ಬಳಿ ರಥಕ್ಕೆ ಸ್ವಾಗತಿಸಿ, ರಥದಲ್ಲಿರುವ ಡಾ‌. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ತಹಶಿಲ್ದಾರ್ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ಹಾರಾರ್ಪಣೆ ಮಾಡಿದರು. ಈ ವೇಳೆ ತಾ.ಪಂ.‌ ಕಾರ್ಯನಿರ್ವಹಣಾಧಿಕಾರಿ ಅವರು ಶುಭಹಾರೈಸಿದರು.

ಬಳಿಕ ನರಿಯೂರು ಬಳಿಯಿಂದ ಕನಕಮಜಲು ಗ್ರಾ.ಪಂ.ವರೆಗೆ ಕಾಲ್ನಡಿಗೆ ಹಾಗೂ ಬೈಕ್ ಜಾಥದ ಮೂಲಕ ಗ್ರಾಮ ಪಂಚಾಯತಿ ಆವರಣಕ್ಕೆ ಸಂವಿಧಾನ ಜಾಗೃತಿ ಜಾಥದ ರಥವು ಆಗಮಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶಿಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಗ್ರಾ.ಪಂ. ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಉಪಸ್ಥಿತರಿದ್ದರು.

ಈ ವೇಳೆ ಸಂವಿಧಾನದ ಜಾಗೃತಿ ಮೂಡಿಸುವ ಬೀದಿ ನಾಟಕದ ಪ್ರದರ್ಶನ ನಡೆಯಿತು. ಸಂವಿಧಾನ ಜಾಥದ ಬಗ್ಗೆ ಕನಕಮಜಲಿನ ಶ್ರೀ ನರಿಯೂರು ರಾಮಣ್ಣ ಗೌಡ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮುಗೇರು ಮಾಣಿಮಜಲು ಕಿ.ಪ್ರಾ.ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧಾ ಕಾರ್ಯಕ್ರಮದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.