ನಗರ ಪಂಚಾಯತ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥ್

0

ಅತಿ ಶೀಘ್ರದಲ್ಲಿ ಸಂಬಂಧ ಪಟ್ಟ ಇಲಾಖೆಯವರನ್ನು ಕರೆಸಿ ಸಭೆ ಸೇರುವ ಭರವಸೆ, ಪ್ರತಿಭಟನೆ ಹಿಂಪಡೆತ

ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಯೋಜನೆಗೆ ನಡೆಸುತ್ತಿರುವ ಕಾಮಗಾರಿಯಲ್ಲಿ ಪೈಪ್ ಅಳವಡಿಸುವ ಕೆಲಸ ಕಾರ್ಯಗಳು ಅವೈಜ್ಞಾನಿಕವಾಗಿದ್ದು ಇದರಿಂದ ಸುಳ್ಯದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಸುಳ್ಯ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ಇಂದು ನಗರ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸುಳ್ಯ ತಹಶೀಲ್ದಾರ್ ನಗರ ಪಂಚಾಯತ್ ಆಡಳಿತಾಧಿಕಾರಿ ಮಂಜುನಾಥ್ ರವರು ಪ್ರತಿಭಟನೆಯ ಉದ್ದೇಶದ ಮಾಹಿತಿಯನ್ನು ಪಡೆದುಕೊಂಡರು. ಈ ವೇಳೆ ತಹಶೀಲ್ದಾರರೊಂದಿಗೆ ಮನವಿ ಮಾಡಿಕೊಂಡ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ಪ್ರಸ್ತುತ ಸಂದರ್ಭದಲ್ಲಿ ನಡೆಸುತ್ತಿರುವ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ವಿವರಿಸಿದರು. ಮನವಿ ಸ್ವೀಕರಿಸಿಕೊಂಡ ತಹಶೀಲ್ದಾರರವರು ಇದೇ ಗುರುವಾರದಂದು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ನಗರ ಪಂಚಾಯತ್ ಸದಸ್ಯರುಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದರು.
ಬಳಿಕ ಉಮರ್ ರವರು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡರು. ಇದೇ ವೇಳೆ ನಗರದ ಬೇರೆ ಬೇರೆ ಕಡೆಗಳಿಂದ ಬಂದ ಸಾರ್ವಜನಿಕರು ಕೂಡ ಪೈಪ್ ಅಳವಡಿಕೆಯ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ತಹಶೀಲ್ದಾರ್ ರವರ ಬಳಿ ಹೇಳಿಕೊಂಡರು.